ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದ ಕಾರ್ಮಿಕ ಇಲಾಖೆಯ ಇನ್ಸ್ಪೆಕ್ಟರ್ ಕಚೇರಿಯಲ್ಲಿ ಶುಕ್ರವಾರ ಕಾರ್ಮಿಕ ಇನ್ಸ್ಪೆಕ್ಟರ್ ಚಂದ್ರು ಪರವಾಗಿ ಲಂಚ ಪಡೆಯುತ್ತಿದ್ದ ಮಧ್ಯವರ್ತಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಧ್ಯವರ್ತಿ ಸಾಗರ್ ಎಂಬುವವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಹನೂರು ತಾಲ್ಲೂಕಿನ ರಾಮಾಪುರದ ದೂರುದಾರ ಲಕ್ಷ್ಮಣ ಮತ್ತು ಅವರ ಸಂಬಂಧಿ ದಗ್ಲರಾಮ್ ಅವರಿಗೆ ಬಾಕಿ ಇರುವ ಕೆಲಸಗಳಿಗಾಗಿ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಅಡಿಯಲ್ಲಿ ನೋಂದಣಿ ಪ್ರಮಾಣಪತ್ರ ನೀಡುವುದಕ್ಕಾಗಿ ನಿರೀಕ್ಷಕ ಚಂದ್ರು ₹5,000 ಮತ್ತು ₹9,000 ಲಂಚ ಕೇಳಿದ್ದರು.
ಲಕ್ಷ್ಮಣ ಅವರು ₹1,000 ಕೊಟ್ಟಿದ್ದರು.ದಗ್ಲರಾಮ್ ಅವರು ₹3,000 ಕೊಟ್ಟಿದ್ದರು. ಈ ಸಂಬಂಧ ಇಬ್ಬರೂ ಗುರುವಾರ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಶುಕ್ರವಾರ ₹5,000 ಹಣ ಕೊಡುವುದಕ್ಕಾಗಿ ನಿರೀಕ್ಷಕರ ಕಚೇರಿಗೆ ಹೋದಾಗ ಚಂದ್ರು ಇರಲಿಲ್ಲ. ಕಡತವೊಂದರಲ್ಲಿ ಇಡುವಂತೆ ಅವರು ಹೇಳಿದ್ದರು. ಈ ಸಂದರ್ಭದಲ್ಲಿ ಸಾಗರ್ ಆ ಹಣವನ್ನು ಪಡೆಯಲು ಬಂದಾಗ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರನ್ನು ಬಂಧಿಸಿದರು.
ಡಿವೈಎಸ್ಪಿ ಮ್ಯಾಥೋ ಥಾಮಸ್, ಇನ್ಸ್ಪೆಕ್ಟರ್ಗಳಾದ ಶಶಿಕುಮಾರ್, ರವಿಕುಮಾರ್ ಸಿಬ್ಬಂದಿ ಶುಕ್ರವಾರ ತಡರಾತ್ರಿವರೆಗೂ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಬಂದಿರುವುದನ್ನು ಅರಿತ ಕಾರ್ಮಿಕ ಇನ್ಸ್ಪೆಕ್ಟರ್ ಚಂದ್ರು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ :ಪ್ರದೀಪ್ ಕುಮಾರ್ ಕೆ