ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ ಎದುರಾಗಿರುವ ತೀವ್ರ ಬಸ್ ಸಮಸ್ಯೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಲು ಸಾರಿಗೆ ಇಲಾಖೆ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಶಿರಹಟ್ಟಿ ತಾಲೂಕು ಘಟಕದ ವತಿಯಿಂದ ಮಾನ್ಯ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಮುಂದಿನ 7 ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಯದಿದ್ದರೆ ತಂಗೋಡ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಎಚ್ಚರಿಸಿದೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸಾರಿಗೆ ಇಲಾಖೆ ಚೆಲ್ಲಾಟ.
ಗದಗ ನಗರದಿಂದ ಶಿರಹಟ್ಟಿ ಗಡಿಭಾಗದ ಹಳ್ಳಿಗಳ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯು ಬಸ್ ಪಾಸ್ ನೀಡುತ್ತಿಲ್ಲ. ಅಷ್ಟೇ ಅಲ್ಲದೆ, ಗದಗ ಸಾರಿಗೆ ಅಧಿಕಾರಿಗಳು “ಕೋಗನೂರು, ನಾಗರಮಡವು, ಅಂಕಲಿ ಹಾಗೂ ಇತರೆ ಕೊನೆಯ ಹಳ್ಳಿಗಳಿಗೆ ಬಸ್ ಪಾಸ್ ನೀಡುವುದಿಲ್ಲ” ಎಂದು ಅಧಿಕೃತ ಸೂಚನಾ ಫಲಕವನ್ನು ಹಾಕಿರುವುದು ವಿದ್ಯಾರ್ಥಿಗಳ ಹಾಗೂ ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾರಿಗೆ ಅಧಿಕಾರಿಗಳ ಈ ಜನವಿರೋಧಿ ಧೋರಣೆಯನ್ನು ಖಂಡಿಸಿದ ಕರವೇ ಕಾರ್ಯಕರ್ತರು, ತಕ್ಷಣವೇ ಆ ಸೂಚನಾ ಪತ್ರವನ್ನು ತೆರವುಗೊಳಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ತಾರತಮ್ಯವಿಲ್ಲದೆ ಪಾಸ್ ವಿತರಿಸಬೇಕೆಂದು ಆಗ್ರಹಿಸಿದರು.
ಪ್ರಮುಖ ಬೇಡಿಕೆಗಳು :
ಬಸ್ ಪಾಸ್ ತಾರತಮ್ಯ ನಿವಾರಣೆ: ಕೋಗನೂರು, ನಾಗರಮಡವು, ಅಂಕಲಿ ಸೇರಿದಂತೆ ಗಡಿಭಾಗದ ಕೊನೆಯ ಹಳ್ಳಿಗಳ ವಿದ್ಯಾರ್ಥಿಗಳಿಗೆ ತಕ್ಷಣವೇ ಬಸ್ ಪಾಸ್ ಸೌಲಭ್ಯ ಕಲ್ಪಿಸಬೇಕು.
ನಿಗದಿತ ಮಾರ್ಗದಲ್ಲಿ ಬಸ್ ಸಂಚಾರ: ಗದಗ ಮತ್ತು ರಾಣೆಬೆನ್ನೂರು ನಗರಗಳಿಂದ ಸಂಚರಿಸುವ ಬಸ್ಸುಗಳು ಕಡ್ಡಾಯವಾಗಿ ವಡವಿ ಹೊಸೂರಿನಿಂದ ಗೋವಿನಕೊಪ್ಪ, ಕೋಗನೂರು ಮೂಲಕ ತಂಗೋಡ ತಲುಪಿ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕು.
ಹೆಚ್ಚುವರಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಅನುಮತಿ: ತಂಗೋಡ ಮೂಲಕ ಹಾದು ಹೋಗುವ ಇತರೆ ಹೆಚ್ಚುವರಿ ಬಸ್ಸುಗಳಲ್ಲೂ ವಿದ್ಯಾರ್ಥಿಗಳು ಪ್ರಯಾಣಿಸಲು ಅನುಮತಿ ನೀಡುವಂತೆ ನಿರ್ವಾಹಕರಿಗೆ (ಕಂಡಕ್ಟರ್) ಸಾರಿಗೆ ಇಲಾಖೆ ತಕ್ಷಣವೇ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಮುಖಂಡರು:
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರಾದ ಶಿವು ಮಠದ, ಜಿಲ್ಲಾ ಉಪಾಧ್ಯಕ್ಷರು ಹಾಗೂ ವಕೀಲರಾದ ಶರಣಪ್ಪ ಪುರತಗಿರಿ, ಪ್ರಮುಖರಾದ ರಾಕೇಶ್ ಬೂದಿಹಾಳ, ರಾಹುಲ್ ಮಡಿವಾಳರ, ಕಿರಣ ಚನ್ನೂರು, ನಾಗರಾಜ್ ಬೀರಬ್ಬಿ, ಸಂಜೀವ ಚೂರಿ, ಮಣಿಕಂಠ, ದುರಗಪ್ಪ ಸೇರಿದಂತೆ ಕರವೇ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಡುವು:
“ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜೊತೆ ಆಟವಾಡುತ್ತಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಮುಂದಿನ 7 ದಿನಗಳ ಒಳಗಾಗಿ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ, ತಂಗೋಡದ ರಾಜ್ಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಸಾರಿಗೆ ಇಲಾಖೆಯ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು.”
— ಕರವೇ ಶಿರಹಟ್ಟಿ ಘಟಕ.
- ಕರುನಾಡ ಕಂದ ಸುದ್ದಿ




















