ಬೆಂಗಳೂರು : ಕರ್ನಾಟಕದಲ್ಲಿ ಗುಟ್ಕಾ ಮಾರಾಟ ನಿಷೇಧಕ್ಕೆ ಸಂಬಂಧಿಸಿದ ಆದೇಶವನ್ನು ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಗುಟ್ಕಾ ನಿಷೇಧ ಆದೇಶದ ಕುರಿತು ಬಹುತೇಕ ಶಾಸಕರಿಂದ, ಅದರಲ್ಲಿಯೂ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಚರ್ಚಿಸಲು ಹಿರಿಯ ಶಾಸಕರು ನಿನ್ನೆ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದೇಶದ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಈ ವೇಳೆ ಸಿಎಂ ಸ್ಪಷ್ಟಪಡಿಸಿದ್ದರು. ಬಳಿಕ ನಡೆದ ಸಂಪುಟ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದೆ. ಆರೋಗ್ಯ ಇಲಾಖೆ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡ ಸಿಎಂ ಡಿ.ಕೆ. ಶಿವಕುಮಾರ್, ತಮ್ಮ ಗಮನಕ್ಕೆ ತರದೇ ಇಂತಹ ಗಂಭೀರ ಆದೇಶವನ್ನು ಹೇಗೆ ಹೊರಡಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಸುಮಾರು ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಈ ನಿರ್ಧಾರ ಪರಿಣಾಮ ಬೀರುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ಹೀಗಾಗಿ, ಗುಟ್ಕಾ ನಿಷೇಧ ಆದೇಶವನ್ನು ಶೀಘ್ರದಲ್ಲೇ ಹಿಂಪಡೆಯುವಂತೆ ಸೂಚನೆ ನೀಡಲಾಗಿದೆ. ಈ ಆದೇಶ ಇಂದೋ ಅಥವಾ ನಾಳೆಯೋ ಹೊರಬೀಳುವ ಸಾಧ್ಯತೆಯಿದೆ.
ವರದಿ : ಜಿಲಾನಸಾಬ್ ಬಡಿಗೇರ್




















