
ಬಸವಕಲ್ಯಾಣ: ಪೂಜ್ಯಶ್ರೀ ಷ.ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಜನ್ಮದಿನೋತ್ಸವ ಹಾಗೂ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಅಂಗವಾಗಿ ಬಸವಕಲ್ಯಾಣದಲ್ಲಿ ಸೆ.27 ಮತ್ತು 28ರಂದು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
“ಜಾಗೃತಿ ನಮ್ಮ ಹೆಜ್ಜೆ–ಆರೋಗ್ಯ ನಮ್ಮ ಗುರಿ” ಎಂಬ ಆಶಯದೊಂದಿಗೆ ಸೆ.27ರಂದು ಬೆಳಗ್ಗೆ 11 ಗಂಟೆಗೆ ಬಸವಕಲ್ಯಾಣ ನಗರದಲ್ಲಿ ಕ್ಯಾನ್ಸರ್ ಮುಕ್ತ ಜೀವನ ಜನಜಾಗೃತಿ ಪಾದಯಾತ್ರೆ–2026 ಆಯೋಜಿಸಲಾಗಿದೆ.
ನಗರದ ಮಹಾತ್ಮ ಗಾಂಧಿ ವೃತ್ತದಿಂದ ಶಿವಾಜಿ ಪಾರ್ಕ್‌ವರೆಗೆ ಪಾದಯಾತ್ರೆ ನಡೆಯಲಿದ್ದು, ರಾಜಕೀಯ ಮುಖಂಡರು, ಹಿರಿಯ ನಾಗರಿಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಗೂ ಯುವಕರು ಸೇರಿದಂತೆ ವಿವಿಧ ವರ್ಗದ ಜನರು ಭಾಗವಹಿಸಲಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ “ಪ್ಲಾಸ್ಟಿಕ್ ಮುಕ್ತ ಸಮಾಜದತ್ತ ಅಭಿನವಶ್ರೀಗಳ ಹಸಿರು ಹೆಜ್ಜೆ” ಎಂಬ ಲೇಖನ ಸಂಗ್ರಹ ಹಾಗೂ ಪರಿಸರ ಜಾಗೃತಿ ಕುರಿತ “ಅಭಿನವಶ್ರೀ ಪ್ಲಾಸ್ಟಿಕ್ ಮುಕ್ತ ಸಮಾಜದ ದೀಪಸ್ತಂಭ” ಕೃತಿಯ ಲೋಕಾರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ ಹಾಗೂ ಸಾಮಾಜಿಕ ಹೊಣೆಗಾರಿಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಕಾರ್ಯಕ್ರಮಗಳು ಹೊಂದಿವೆ.
ಸೆ.28ರಂದು ಬೆಳಗ್ಗೆ 11 ಗಂಟೆಗೆ ಗವಿಮಠದ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಯುವ ಕ್ರಾಂತಿ ಸಂಘಟನೆಯ ವತಿಯಿಂದ ಹಾಗೂ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಟ್ರಸ್ಟ್‌ನ ಸಹಯೋಗದಲ್ಲಿ ನಡೆಯುವ ಶಿಬಿರದಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವಂತೆ ಕರೆ ನೀಡಲಾಗಿದೆ. “ರಕ್ತದಾನ ಮಾಡಿ ಜೀವ ಉಳಿಸಿ” ಎಂಬ ಸಂದೇಶದೊಂದಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಒಂದು ಹನಿ ರಕ್ತವೂ ಮತ್ತೊಂದು ಜೀವಕ್ಕೆ ನೆರವಾಗಬಹುದು ಎಂಬ ಮಾನವೀಯ ಸಂದೇಶವನ್ನು ಸಾರಲಾಗುತ್ತಿದೆ.
ಜನ್ಮದಿನೋತ್ಸವ ಹಾಗೂ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಅಂಗವಾಗಿ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತರು, ಶರಣ ಬಂಧುಗಳು, ಧರ್ಮಾಭಿಮಾನಿಗಳು ಹಾಗೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ವರದಿ: ಶ್ರೀನಿವಾಸ ಬಿರಾದಾರ




















