ಬಳ್ಳಾರಿ / ಕಂಪ್ಲಿ: ‘ವಚನ ಸಾಹಿತ್ಯದಲ್ಲಿ ಅಡಗಿರುವ ಅರಿವು ಮತ್ತು ಅನುಭಾವದ ವಿಚಾರಗಳು ಇಂದಿನ ಆಧುನಿಕ ಸಮಾಜದ ಕಲ್ಮಶಗಳನ್ನು ತೊಳೆದು, ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸಲು ದಾರಿದೀಪವಾಗಿವೆ’ ಎಂದು ಗಂಗಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ಹಾಗೂ ಆದರ್ಶ ಶಿಕ್ಷಕರಾದ ಶ್ರೀನಿವಾಸ ಅಂಗಡಿ ಅವರು ಪ್ರತಿಪಾದಿಸಿದರು.
ಅವರು ಪಟ್ಟಣದ ನಂ.10 ಮುದ್ದಾಪುರ ರಸ್ತೆಯ ವಿಜಯನಗರ ಕಾಲುವೆ ದಡದಲ್ಲಿರುವ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಕಂಪ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 194ನೇ ‘ಮಹಾಮನೆ’ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯದ ಬೆಳಕಿನಲ್ಲಿ ಅರಿವು, ಅನುಭಾವ ಮತ್ತು ಮಾನವೀಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ತಮ್ಮ ಉಪನ್ಯಾಸವನ್ನು ಮುಂದುವರೆಸಿದ ಶ್ರೀನಿವಾಸ ಅಂಗಡಿ ಅವರು, “ಬಸವಾದಿ ಶರಣರ ವಚನಗಳು ಕೇವಲ ಸಾಹಿತ್ಯವಲ್ಲ, ಅವು ಬದುಕಿನ ಸತ್ಯಗಳು. ಅರಿವು ಎಂದರೆ ಕೇವಲ ಅಕ್ಷರ ಜ್ಞಾನವಲ್ಲ, ಅದು ತನ್ನನ್ನು ತಾನು ತಿಳಿಯುವುದು. ಈ ಅರಿವು ಅನುಭಾವವಾಗಿ ಬದಲಾದಾಗ ಮಾತ್ರ ಮನುಷ್ಯನಲ್ಲಿ ನೈಜ ಮಾನವೀಯತೆ ಮೊಳಕೆಯೊಡೆಯುತ್ತದೆ. ಇಂದಿನ ಯುವ ಪೀಳಿಗೆಗೆ ವಚನಗಳ ಸಂದೇಶವನ್ನು ತಲುಪಿಸುವ ಅಗತ್ಯವಿದೆ” ಎಂದು ಮಾರ್ಮಿಕವಾಗಿ ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಡಿವಾಳ ಹುಲುಗಪ್ಪ ನೆರವೇರಿಸಿದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತಕರಾದ ಕ. ಮಾ. ಹೆಮ್ಮಯ್ಯ ಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶರಣ ತತ್ವಗಳ ಪ್ರಸ್ತುತತೆಯನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಅಶೋಕ ಕುಕುನೂರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವರಾಜ,
ಶಿಕ್ಷಕರಾದ ಚಂದ್ರಯ್ಯ ಸೊಪ್ಪಿಮಠ, ಡಾ. ಸುನಿಲ್, ರಮೇಶ ಸುಗ್ಗೆನಹಳ್ಳಿ, ಎಸ್. ಶ್ಯಾಮ ಸುಂದರ್, ಜ್ಯೋತಿ ಇಟಗಿ, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಹುಲುಗಪ್ಪ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಎಚ್.ನಾಗರಾಜ, ಅಶೋಕ ಕುಕನೂರು, ಎಲಿಗಾರ ವೆಂಕಟರೆಡ್ಡಿ, ಕೆ.ಚಂದ್ರಶೇಖರ್, ಬಿ. ಎಂ. ರುದ್ರಯ್ಯ, ಬಡಿಗೇರ ಜಿಲಾನ್‌ಸಾಬ್, ಮರಿಶೆಟ್ರು ಸುರೇಶ್, ಶಂಕ್ರಪ್ಪ, ವಿರೂಪಾಕ್ಷಿ, ಡಿ.ಬಸವರಾಜ, ಎಂ.ವಿರೂಪಾಕ್ಷಿ, ಅಯ್ಯೋದಿ ಹನುಮಂತ, ಎಂ.ರಾಜಾ, ಎಂ.ರಾಘವೇಂದ್ರ, ಶರಣರು, ಗಣ್ಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















