ಬೆಂಗಳೂರು: ಭಾರತದಲ್ಲಿ ಜೀವನ ನಿರ್ವಹಣೆಗೆ ಆಸರೆಯಾಗಿರುವ ಜೀವನಾಂಶ ಕಾನೂನು 9 ಪ್ರಮುಖ ಕಾನೂನುಗಳನ್ನು ಹೊಂದಿದೆ.
2023 ರಲ್ಲಿ ಜಾರಿಗೆ ತಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅನೇಕರಿಗೆ ಸಾಂತ್ವನ ನೀಡಿದೆ. ಪ್ರತಿಯೊಬ್ಬ ನಾಗರಿಕರಿಗೂ ಕನಿಷ್ಠ ಆಹಾರ, ಬಟ್ಟೆ, ಔಷಧ, ಬದುಕಲು ತೀರ ಅವಶ್ಯಕತೆಯುಳ್ಳ ವಸ್ತುಗಳನ್ನು ಒದಗಿಸುವುದು, ಈ ಎಲ್ಲಾ ಒಂಬತ್ತು ಕಾನೂನುಗಳ ಸಾರ ಸಂಗ್ರಹವಾಗಿದೆ. ನಮ್ಮ ದೇಶ ವಿವಿಧ ಜಾತಿ, ಧರ್ಮ, ಪಂಥಗಳನ್ನು ಹೊಂದಿದ ರಾಷ್ಟ್ರವಾಗಿದ್ದರಿಂದ ಈ ಜೀವನಾಂಶ ಕಾನೂನುಗಳಲ್ಲಿ ಸ್ವಲ್ಪ ಸ್ವಲ್ಪ ವ್ಯತ್ಯಾಸಗಳು ಇವೆ, ಆದರೆ 2023 ರಲ್ಲಿ ಜಾರಿಗೊಳಿಸಲಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ರಕ್ಷಣೆ ನೀಡುವಲ್ಲಿ ಸಫಲವಾಗಿದೆ ಎಂದು ಶಿರಸಿ ಕಾನೂನು ವಿದ್ಯಾಲಯದ ಪ್ರಾಚಾರ್ಯ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಮಿತಿ ಸದಸ್ಯರಾದ ಡಾ. ಎ ಎನ್ ಭಟ್ಕಳರವರು ನುಡಿದರು. ಅವರು ನಗರದ ಗಾಯತ್ರಿ ಗೆಳೆಯರ ಬಳಗದಲ್ಲಿ ಜೀವನ ನಿರ್ವಹಣಾ ಆಸರೆಯಾಗಿ ಜೀವನಾಂಶ ಕಾನೂನು ಕುರಿತು ಉಪನ್ಯಾಸ ನೀಡುತ್ತಿದ್ದರು. ಅವರು ಮುಂದುವರೆದು ಈ ಕಾನೂನುಗಳಲ್ಲಿ ಉಲ್ಲೇಖಿಸಿದ ವಿವಿಧ ಸ್ತರದ ವಾರಸುದಾರರ ಹಾಗೂ ಅವರು ಪಡೆಯಬಹುದಾದ ಜೀವನಾಂಶ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಪದ್ಧತಿ, ವಿವಾಹದ ರಿಜಿಸ್ಟ್ರೇಷನ್ ಹಾಗೂ ರಿಜಿಸ್ಟರ್ ವಿವಾಹ, ಕುಟುಂಬದ ಜವಾಬ್ದಾರಿ, ಆದಾಯ ಇರದವರಿಗೆ ಹೇಗೆ ಈ ಕಾನೂನು ನೆರವು ಪಡೆಯಬಹುದು ಎಂಬುದನ್ನು ವಿವರವಾಗಿ ಹೇಳಿ ಸಭಿಕರ ಅನೇಕ ಸಂದೇಹಗಳಿಗೆ ಪರಿಹಾರ ಸೂಚಿಸಿದರು. ಉನ್ನತ ವಿಚಾರಗಳನ್ನು ಹೊಂದಿರುವ ಈ ಬಳಗದ ಸದಸ್ಯರನ್ನು ಗಮನಿಸಿದಾಗ ಇದು ಒಂದು ಅನುಭವ ಮಂಟಪ ಅನಿಸುತ್ತದೆ ಎಂದು ಬಳಗದ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು .
ಸಾಂಸ್ಕೃತಿಕ ಚಿಂತಕ ರವಿ ಹೆಗಡೆ ಗಡಿಹಳ್ಳಿ ಅವರು ಉಪನ್ಯಾಸಕರನ್ನು ಸೊಗಸಾಗಿ ಪರಿಚಯಿಸಿದರು, ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆ ಅವರು ಗೌರವಾರ್ಪಣೆ ಸಮರ್ಪಿಸಿ, ಎಲ್ಲರನ್ನೂ ವಂದಿಸಿದರು. ಶಾಂತಿ ಭಟ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಇದೇ ಸಂದರ್ಭದಲ್ಲಿ ಡಿ ಎಸ್ ಹೆಗಡೆ ಮುರೂರ ಅವರು ಕಾಂನ್ಧಾರಿ ಚಲನಚಿತ್ರದ ಉತ್ಕೃಷ್ಟತೆಯನ್ನು ಸಭೆಗೆ ಪರಿಚಯಿಸಿ, ಪ್ರತಿಯೊಬ್ಬನೂ ನೋಡಲೇಬೇಕಾದ ಅಭಿಮಾನ ಪಡುವಂತಹ ಚಿತ್ರ ಎಂದು ವರ್ಣಿಸಿದರು.
ಸಭೆಯಲ್ಲಿ ಡಾ. ಆರ್ ಎನ್ ಹೆಗಡೆ ಬಂಡಿಮನೆ, ರಾಮಕೃಷ್ಣ ಬೈಲಕೇರಿ, ಲಕ್ಷ್ಮಣ ಶಾನಭಾಗ, ತ್ರಿವೇಣಿ ಹೆಗಡೆ ಕೃಷ್ಣವೇಣಿ ಹೆಗಡೆ, ಆಶಾ ಸಭಾಹಿತ, ಸುಧಾ ಹೆಗಡೆ, ಆರ್ ಎಸ್ ಹೆಗಡೆ, ಎಸ್ ಮಂಜುನಾಥ್, ನಾರಾಯಣ ಪುರಾಣಿಕ, ಪಿ ಆರ್ ಹೆಗಡೆ, ಜಿ ಆರ್ ಗಾಯತ್ರಿ, ಎನ್ ಕೆ ಹೆಗಡೆ, ಗೋಪಾಲ ಉಡುಪಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ




















