
ಮಡಿಕೇರಿ :ಜಾಗತಿಕ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಕಾಫಿ, ವಿಶ್ವದಾದ್ಯಂತ ಲಕ್ಷಾಂತರ ಕುಟುಂಬಗಳ ಜೀವನೋಪಾಯದ ಪ್ರಮುಖ ಆಧಾರವಾಗಿದೆ. ಕಾಫಿಯ ಮಹತ್ವ ಹಾಗೂ ಕಾಫಿ ಬೆಳೆಗಾರರ ಕೊಡುಗೆಯನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಕಾಫಿ ಮಂಡಳಿಯ ಕಾಫಿ ಸಂಶೋಧನಾ ಉಪಕೇಂದ್ರ, ಚೆಟ್ಟಳ್ಳಿ ವತಿಯಿಂದ ಅಂತರರಾಷ್ಟ್ರೀಯ ಕಾಫಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಂತರರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಕಂಡಕೆರೆಯ ಸರ್ಕಾರಿ ಶಾಲೆಯ ಮಕ್ಕಳು, ಚೆಟ್ಟಳ್ಳಿ ಪಟ್ಟಣದ ಸಾರ್ವಜನಿಕರು ಹಾಗೂ ಕಾಫಿ ಸಂಶೋಧನಾ ಉಪಕೇಂದ್ರದ ಆವರಣದಲ್ಲಿ ಇದ್ದವರಿಗೆ ಕಾಫಿ ವಿತರಿಸಲಾಯಿತು.
ಈ ಮೂಲಕ ಕಾಫಿಯ ಮಹತ್ವ ಹಾಗೂ ಕಾಫಿ ಬೆಳೆಗಾರರ ಕೊಡುಗೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಫಿ ಮಂಡಳಿಯ ಜಂಟಿ ನಿರ್ದೇಶಕರು ಹಾಗೂ ಕಾಫಿ ಸಂಶೋಧನಾ ಉಪಕೇಂದ್ರದ ಮುಖ್ಯಸ್ಥರಾದ ಡಾ. ಬಾಬು, ಕಾಫಿ ಕೇವಲ ಒಂದು ಪಾನೀಯವಲ್ಲ; ವಿಶ್ವದಾದ್ಯಂತ ಕೋಟ್ಯಂತರ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿರುವ ಪ್ರಮುಖ ವಾಣಿಜ್ಯ ಬೆಳೆಯಾಗಿದೆ ಎಂದು ಹೇಳಿದರು.
ವಿಶ್ವದಲ್ಲಿ ಪೆಟ್ರೋಲಿಯಂ ನಂತರ ಅತಿ ಹೆಚ್ಚು ವಹಿವಾಟು ನಡೆಯುವ ಪ್ರಮುಖ ವಾಣಿಜ್ಯ ಉತ್ಪನ್ನಗಳಲ್ಲಿ ಕಾಫಿಯೂ ಒಂದಾಗಿದೆ. ಜಗತ್ತಿನ ಸುಮಾರು 80 ದೇಶಗಳ ಆರ್ಥಿಕತೆಯು ಕಾಫಿ ಕ್ಷೇತ್ರದೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಅವಲಂಬಿತವಾಗಿದ್ದು, ಈ ಪೈಕಿ ಸುಮಾರು 50 ದೇಶಗಳು ಕಾಫಿ ಕ್ಷೇತ್ರದ ಮೇಲೆ ಹೆಚ್ಚಿನ ಆರ್ಥಿಕ ಅವಲಂಬನೆ ಹೊಂದಿವೆ ಎಂದು ತಿಳಿಸಿದರು.
ಭಾರತ ಕಾಫಿ ಉತ್ಪಾದನೆಯಲ್ಲಿ ವಿಶ್ವದ 7ನೇ ಸ್ಥಾನದಲ್ಲಿದ್ದು, ಕಾಫಿ ರಫ್ತಿನಲ್ಲಿ 5ನೇ ಸ್ಥಾನದಲ್ಲಿದೆ. ಕಾಫಿ ಕ್ಷೇತ್ರಕ್ಕೆ ಮೀಸಲಾದ ವಿಶೇಷ ಸಂಶೋಧನಾ ಸಂಸ್ಥೆಯನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಕಾಫಿ ಸಂಶೋಧನೆ ಹಾಗೂ ತಂತ್ರಜ್ಞಾನದ ಮೂಲಕ ಬೆಳೆಗಾರರಿಗೆ ನೆರವಾಗುವುದರ ಜೊತೆಗೆ, ಕಾಫಿ ಕ್ಷೇತ್ರದ ಎಲ್ಲಾ ಪಾಲುದಾರರ ಹಿತಾಸಕ್ತಿಯನ್ನು ಬಲಪಡಿಸುವ ಅಗತ್ಯವಿದೆ ಎಂದು ಡಾ. ಬಾಬು ಹೇಳಿದರು.
ವರದಿ: ಪ್ರಿತುನ್ ಪೂವಣ್ಣ




















