ಕಂಪ್ಲಿ: ಪಟ್ಟಣದ ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ಬಸ್‌ಗಳನ್ನು ಕಡ್ಡಾಯವಾಗಿ ನಿಲುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಸಾರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ಸಪ್ತಗಿರಿ ಮಂಚಿಕಂಟಿ, “ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಭಾಗದಲ್ಲಿ ಬಸ್ ನಿಲ್ಲಿಸುವಂತೆ ಸಾರಿಗೆ ಇಲಾಖೆಯ ಸ್ಪಷ್ಟ ಆದೇಶವಿದೆ. ಆದರೂ ಕೆಲವು ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಇಲ್ಲಿ ವಾಹನಗಳನ್ನು ನಿಲುಗಡೆ ಮಾಡದೆ ನಿಯಮ ಉಲ್ಲಂಘಿಸುತ್ತಿದ್ದಾರೆ” ಎಂದು ದೂರಿದರು.
“ಬಸ್ ನಿಲ್ಲಿಸುವಂತೆ ವಿನಂತಿಸುವ ವಿದ್ಯಾರ್ಥಿಗಳೊಂದಿಗೆ ಸಾರಿಗೆ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳು ಬಸ್ ನಿಲ್ಲಿಸಲು ಸೂಚಿಸಿದಾಗ, ಚಾಲಕ ನಿರ್ಲಕ್ಷ್ಯದಿಂದ ಅತಿ ವೇಗವಾಗಿ ಬಸ್ ಚಲಾಯಿಸಿದ್ದಾನೆ. ಇದರಿಂದಾಗಿ ಕಾಲೇಜಿನ ವಿದ್ಯಾರ್ಥಿ ಪಿ.ಎಚ್. ವಿಕಾಸ್ ಎಂಬಾತನ ಕೈಗೆ ಗಾಯವಾಗಿದೆ” ಎಂದು ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ವಿದ್ಯಾರ್ಥಿಗಳ ಕಾಲೇಜು ಸಮಯಕ್ಕೆ ಪೂರಕವಾಗಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕಾಲೇಜು ಬಳಿ ಬಸ್‌ಗಳ ಕಡ್ಡಾಯ ನಿಲುಗಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಒಂದು ವಾರದೊಳಗೆ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಸಂಚಾಲಕ ಕಾರ್ತಿಕ ಹಾಗೂ ವಿದ್ಯಾರ್ಥಿಗಳಾದ ವಿಕಾಸ್, ನವೀನ್, ಶಶಾಂಕ್, ವೆಂಕಟ್, ಸಂತೋಷಕುಮಾರ್ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















