
41 ವರ್ಷಗಳ ಸಂಪ್ರದಾಯದಂತೆ ಶ್ರೀ ಅಂಬಾಭವಾನಿ ದೇವಿಯ ಘಟಸ್ಥಾಪನೆ : ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು
ರಟಕಲ್: ತೊಗರಿಯ ನಾಡು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ 41 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ನವರಾತ್ರಿ ಉತ್ಸವವು ಈ ವರ್ಷವೂ ಭಕ್ತಿಭಾವದಿಂದ ಜರುಗಿತು.
ಗ್ರಾಮದ ಶ್ರೀ ಅಂಬಾಭವಾನಿ ಮಂದಿರದಲ್ಲಿ ನವರಾತ್ರಿ ಅಂಗವಾಗಿ ಘಟಸ್ಥಾಪನೆ ನೆರವೇರಿಸಿ, ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.
ಪ್ರತಿವರ್ಷದ ಸಂಪ್ರದಾಯದಂತೆ ಈ ಬಾರಿಯೂ ಶ್ರೀ ಅಂಬಾಭವಾನಿ ದೇವಿಯ ಘಟಸ್ಥಾಪನೆ ನೆರವೇರಿಸಿ, ಒಂಬತ್ತು ದಿನಗಳ ಕಾಲ ಪ್ರತಿದಿನ ಮಹಾಭಿಷೇಕ, ವಿಶೇಷ ಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಧಾರ್ಮಿಕ ವಾತಾವರಣ ಮನೆಮಾಡಿದ್ದು, ಭಕ್ತರು ದೇವಿಯ ದರ್ಶನ ಪಡೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ವಿಜೃಂಭಣೆಯಿಂದ ನಡೆದ ವಿಜಯದಶಮಿ ಮೆರವಣಿಗೆ
ಮಂಗಳವಾರ, ಅಕ್ಟೋಬರ್ 20, 2026ರಂದು ವಿಜಯದಶಮಿ ಅಂಗವಾಗಿ ಶ್ರೀ ಅಂಬಾಭವಾನಿ ದೇವಿಯ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ವಿವಿಧ ವಾದ್ಯವೃಂದಗಳ ಮಂಗಳವಾದ್ಯ, ಭಾಜಾ-ಭಜಂತ್ರಿ, ಡೊಳ್ಳು ಕುಣಿತ ಹಾಗೂ ಮಕ್ಕಳ ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ದೇವಿಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು. ಗ್ರಾಮದ ಮಹಿಳೆಯರು ಕುಂಭ-ಕಳಸಗಳನ್ನು ಹೊತ್ತು ಆರತಿ ಬೆಳಗುವ ಮೂಲಕ ದೇವಿಗೆ ಭಕ್ತಿಪೂರ್ವಕವಾಗಿ ಸ್ವಾಗತ ಕೋರಿದರು. ಮೆರವಣಿಗೆಯುದ್ದಕ್ಕೂ ಭಕ್ತರು ದೇವಿಯ ದರ್ಶನ ಪಡೆದು ಉತ್ಸವದಲ್ಲಿ ಪಾಲ್ಗೊಂಡರು.
ಶ್ರೀ ಅಂಬಾಭವಾನಿ ದೇವಸ್ಥಾನ ಮಂಡಳಿಯ ಅಧ್ಯಕ್ಷ ಮಾನಶೆಟ್ಟಿ ಸೀಗಿ, ಬಸವರಾಜ ಕಿನ್ನಿ, ಶರಣಬಸಪ್ಪ ಮಾಮಶೆಟ್ಟಿ, ಸಂತೋಷ್ ಚೌಕ, ಶಿವಶರಣ ಕಲಶೆಟ್ಟಿ, ಸಿದ್ದಣ್ಣ ಬೀರನಳ್ಳಿ, ರಾಘವೇಂದ್ರ ಗುಂಡನೋರ್, ಪ್ರಕಾಶ್ ಸುತಾರ್, ಸುಧಾಕರ್ ಸ್ವಂತ, ನಾಗರಾಜ್ ಸುತಾರ್, ಮುರುಗೆಪ್ಪ ಸೀಗಿ, ದೇವಸ್ಥಾನದ ಅರ್ಚಕ ಪ್ರಜ್ವಲ್ ದುದ್ದಗಿ, ರೈತ ಮುಖಂಡ ವೀರಣ್ಣ ಗಂಗಾಣಿ ಸೇರಿದಂತೆ ಗ್ರಾಮದ ಅನೇಕ ಮುಖಂಡರು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




















