ಭದ್ರಾವತಿ: ಉಪವಿಭಾಗದ ನಗರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿ ಐಎಸ್‌ಐ ಪ್ರಮಾಣಿತವಲ್ಲದ ಹಾಗೂ ಕಳಪೆ ಗುಣಮಟ್ಟದ ಹಾಫ್ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ 5 ಅಂಗಡಿಗಳ ಮೇಲೆ ದಾಳಿ ನಡೆಸಿ 141 ಕಳಪೆ ಹಾಫ್ ಹೆಲ್ಮೆಟ್ ಗಳನ್ನು ವಶಪಡಿಸಿಕೊಳ್ಳುವ ಮೂಲಕ ಹಾಫ್ ಹೆಲ್ಮೆಟ್ ಗೆ ಅವಕಾಶ ಇಲ್ಲವೆಂಬ ಸಂದೇಶ ಸಾರಿದ್ದಾರೆ.
ವಾಹನ ಸವಾರರಿಗೆ ಐಎಸ್‌ಐ ಪ್ರಮಾಣಿತವಲ್ಲದ ಈ ಹೆಲ್ಮೆಟ್ ಧರಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಐಎಸ್‌ಐ ಪ್ರಮಾಣಿತ ಹೆಲ್ಮೆಟ್‌ಗಳನ್ನು ಧರಿಸುವುದರಿಂದಾಗುವ ಉಪಯೋಗಗಳ ಕುರಿತಂತೆ ಬುಧವಾರದಿಂದ ಜಾಗೃತಿ ಮೂಡಿಸಲಾಗುವುದು ಎಂದು ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಹಾಫ್ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಇನ್ನುಮುಂದಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಪೊಲೀಸರಿಗೆ ಹೆದರಿ ಹೆಲ್ಮೆಟ್ ಧರಿಸುವ ಬದಲು ವಾಹನ ಸವಾರರು ಅವರ ಅಮೂಲ್ಯವಾದ ಜೀವ ಉಳಿಸುವುದಕ್ಕಾಗಿ ಐ ಎಸ್ ಐ ಮಾರ್ಕ್ ಇರುವ ಪೂರ್ಣ ಹೆಲ್ಮೆಟ್ ಧರಿಸಬೇಕೆಂದು ಸಂಚಾರಿ ಠಾಣೆಯ ಪಿ ಎಸ್ ಐ -1 ಶಾಂತಲಾ ಕರೆ ನೀಡಿದರು.
ಸಂಚಾರಿ ಠಾಣೆ ಪಿ ಎಸ್ ಐ -2 ಭಾರತಿ, ಹಳೇನಗರ ಠಾಣೆ ಪಿ ಎಸ್ ಐ ಚಂದ್ರಶೇಖರ್ ಹಾಗೂ ಸಂಚಾರಿ ಠಾಣೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಕೆ ಆರ್ ಶಂಕರ್ ಭದ್ರಾವತಿ