ಭಾವನೆಗಳ ಬತ್ತಿಯ ಹೊಸೆದು
ಪ್ರೀತಿ ಪ್ರೇಮದ ತೈಲವ ಸುರಿದು
ಅಜ್ಞಾನದ ಕತ್ತಲೆಯ ಕಳೆದು
ಸುಜ್ಞಾನದ ಹಾದಿಯ ಜಾಡು ಹಿಡಿದು
ಏಕತೆಯ ದೀಪದ ಬೆಳಕನು
ಈ ಜಗಕೆ ಬೆಳಗುತ ಸಾರೋಣ…!!
ಜಾತಿ ಮತ ಭೇದಭಾವದ
ಕಲ್ಮಶವ ಹಣತೆಯಲ್ಲಿ ಹಾಕಿ
ಸಮ ಪಾಲು ಸಮ ಬಾಳು ಎಂಬ
ಸಮಾನತೆಯ ದೀಪವ ಬೆಳಗೋಣ
ಸಂಭ್ರಮದ ಹಬ್ಬ ದೀಪಾವಳಿಗೆ…!!
ಮೇಲು-ಕೀಳು ಬಡವ ಬಲ್ಲಿದ
ಭಾವ ಕಳಚಿ ಹಣತೆಯಲ್ಲಿ ಹಾಕಿ
ಒಂದೆ ಕುಲದ ದೀಪವ ಬೆಳಗೋಣ
ಸಡಗರದ ಹಬ್ಬ ದೀಪಾವಳಿಗೆ…!!
ಮದ ಮತ್ಸರ ದ್ವೇಷ ಅಸೂಯೆ
ಹಗೆತನವ ಹಣತೆಯಲ್ಲಿ ಹಾಕಿ
ಸಾಮರಸ್ಯದ ದೀಪವ ಬೆಳಗೋಣ
ಸಂಭ್ರಮದ ಹಬ್ಬ ದೀಪಾವಳಿಗೆ…!!
ಕೋಪ ತಾಪ ರೋಷ ವೀರಾವೇಷಗಳ
ತಣಿಸಿ ಹಣತೆಯಲ್ಲಿ ಹಾಕಿ
ತಾಳ್ಮೆಯ ದೀಪವ ಬೆಳಗೋಣ
ಸಂಭ್ರಮದ ಹಬ್ಬ ದೀಪಾವಳಿಗೆ…!!
ನಾನು ನನ್ನದು ನನ್ನಿಂದಲೇ
ಎನ್ನುವ ಅಹಂಭಾವ ಅಹಂಕಾರ
ಮರೆತು ಹಣತೆಯಲ್ಲಿ ಹಾಕಿ
ಬಾಂಧವ್ಯದ ದೀಪವ ಬೆಳಗೋಣ
ಸಂಭ್ರಮದ ಹಬ್ಬ ದೀಪಾವಳಿಗೆ…!!
ಅನ್ಯಾಯ ಅಧರ್ಮ ಅನಿಷ್ಠವನು
ಅಳಿಸಿ ಹಣತೆಯಲ್ಲಿ ಹಾಕಿ
ಆತ್ಮ ಸಾಕ್ಷಾತ್ಕಾರದ ದೀಪವ ಬೆಳಗೋಣ
ಸಂಭ್ರಮದ ಹಬ್ಬ ದೀಪಾವಳಿಗೆ…!!
ಸತ್ಯ ನ್ಯಾಯ ನೀತಿ ಎತ್ತಿ ಹಿಡಿದು
ಧರ್ಮವ ಬೆಳಗುವ ಹಣತೆಗೆ
ಸ್ಪೂರ್ತಿಯ ತೈಲವ ಸುರಿದು
ಬೆಳಕನು ಚೆಲ್ಲುವ ಬೆಳದಿಂಗಳಿಗೆ
ಸನ್ಮಾರ್ಗದ ದೀಪವ ಬೆಳಗೋಣ
ಸಂಭ್ರಮದ ಹಬ್ಬ ದೀಪಾವಳಿಗೆ…!!
ಪರಸ್ಪರ ಸ್ನೇಹ ಪ್ರೀತಿಯ ಬೆಸೆದು
ಮನ ಮನದಲ್ಲೂ ತುಂಬಿ ಹರಿದು
ಒಲವಿನ ದೀಪವ ಬೆಳಗೋಣ
ಸಂಭ್ರಮದ ಹಬ್ಬ ದೀಪಾವಳಿಗೆ…!!
ಮನದ ಕಗ್ಗತ್ತಲೆಯು ಕಳೆದು
ಮನುಜ ಪಥದಲ್ಲಿ ನಡೆದು
ಒಂದೇ ತಾಯಿಯ ಮಕ್ಕಳಾಗಿ
ಬಾಳ ಬೆಳಗುವ ತಾರೆಗಳಾಗಿ
ಸಡಗರದಿ ದೀಪವ ಬೆಳಗೋಣ
ಸಂಭ್ರಮದ ಹಬ್ಬ ದೀಪಾವಳಿಗೆ…!!
-ಮಲ್ಲಪ್ಪ ಭೈರಗೊಂಡ
ಹಾಲಕೆರೆ,ಗದಗ ಜಿಲ್ಲೆ