ಚಿಟಗುಪ್ಪ: ಮಹಿಳೆಯರು ಆರ್ಥಿಕ ಕ್ಷೇತ್ರಗಳಲ್ಲಿ ಯಶಸ್ಸು ದುಡಿಮೆ. ಕೃಷಿ, ಮನೆಯ ಕೆಲಸ,ಮಕ್ಕಳು, ಮನೆಯ ನಿರ್ವಹಣೆ.ಭೌದ್ದಿಕ ಜೊತೆಗೆ ಸೃಜನಶೀಲ ಕಾರ್ಯಗಳು, ನೀತಿ ಶಿಕ್ಷಣ ಸರ್ವರಿಗೂ ನೀಡಿ, ಸಮುದಾಯವನ್ನು ನಿರ್ಮಾಣ ಮಾಡುವಲ್ಲಿ ಮಹಿಳೆಯರ ತ್ಯಾಗ ಬಲಿದಾನ ದೊಡ್ಡದು ಎಂದು ಸಾಹಿತಿ, ಪ್ರಗತಿಪರ ಚಿಂತಕಿ ಶರಣೆ ಸುವರ್ಣ ಎಸ್ ಚೀಮನಕೋಡೆ ನುಡಿದರು.
ನಗರದ ಆರ್ಯ ಸಮಾಜ ಮಂದಿರದಲ್ಲಿ ನಡೆದ ಸಮಾನ ಮನಸ್ಕರ ಮಹಿಳಾ ಬಳಗದ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ
ಮಹಿಳಾ ಸಮಸ್ಯೆಗಳಿಗೆ ಶಿವಶರಣರ ವಚನಗಳಲ್ಲಿ ಪರಿಹಾರವಿದೆ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದ ಅವರು ಸಮಾಜದ ಆರೋಗ್ಯ ಸರಿಯಾಗ ಬೇಕಾದರೆ ಗಂಡು- ಹೆಣ್ಣೆಂಬ ಭಾವನೆ ದೂರವಾಗಬೇಕು. ಶಿವಶರಣರ ವಚನಗಳ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದು, ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಪುರಸ್ಕೃತೆ ಶರಣೆ ಮಲ್ಲಮ್ಮ ಆರ್ ಪಾಟೀಲರು ಗೌರವ ಅಭಿನಂದನಾ ಸನ್ಮಾನ ಸ್ವೀಕರಿಸಿ, ಆಧುನಿಕ ಮಹಿಳೆಯರ ಜ್ವಲಂತ ಸಮಸ್ಯೆಗಳು ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿ
ಮಾತನಾಡಿದ ಅವರು ಇಂದು ಹೆಣ್ಣು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಿದ್ದಾಳೆ. ಸ್ತ್ರೀ ವಿದ್ಯಾಭ್ಯಾಸ ಹಾಗೂ ಉದ್ಯೋಗ ಪ್ರಮಾಣ ಗಣನೀಯವಾಗಿ ಹೆಚ್ಚಾಗಿರುವುದು ದಾಖಲಾಗಿದ್ದರೂ ಉನ್ನತ ಅಧಿಕಾರ ಸ್ಥಾನಗಳಲ್ಲಿ, ಮಹತ್ವದ ನಿರ್ಧಾರ, ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಸಧ್ಯ ಎದುರಾಗಿದೆ.ಸಮಾಜದ ಮುಖ್ಯವಾಹಿನಿಯಲ್ಲಿ ತನ್ನ ಹಕ್ಕು ಪ್ರತಿಪಾದಿಸುವಂತಹ ಗುರುತುರವಾದ ಸವಾಲನ್ನು ಇಂದಿನ ಆಧುನಿಕ ಮಹಿಳೆ ತನ್ನ ಹೆಗಲ ಮೇಲೆ ಹೊರಬೇಕಿದೆ. ಹಾದಿ ದುರ್ಗಮವಾದರೂ ನಡೆಯಲಾಗದಷ್ಟು, ಗುರಿ ತಲುಪಲಾಗದಷ್ಟು ಕಠಿಣವಾದುದಲ್ಲ. ಹೆಜ್ಜೆಗಳು ದೃಢವಾಗಬೇಕು ಅಷ್ಟೇ ಸದೃಢ,ಸಶಕ್ತವಾಗಬೇಕೆಂದರು.
ಸಾನಿಧ್ಯ ವಹಿಸಿದ ಬಸವ ತತ್ವ ಪ್ರಚಾರಕ ಶರಣೆ ಇಂದುಮತಿ ಗಾರಂಪಳ್ಳಿ ಮಾತನಾಡಿ ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ ಎಂಬ ನುಡಿಯಂತೆ ಸಮೃದ್ಧ, ಸ್ವಾಭಿಮಾನಿ, ಸಮಾಜದ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ದೊಡ್ಡದಾಗಿದೆ. ಸಮಾಜದ ಅಂಕು-ಡೊಂಕು, ಸಮಸ್ಯೆಗಳ ನಿವಾರಣೆಗೆ ಮಹಿಳೆಯರು ಮುಂದಾಗಿ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಾರೆ, ಸ್ವಂತ ಸಾಮರ್ಥ್ಯದಿಂದ ಸಮಾಜಮುಖಿ ಕೆಲಸ ಮಾಡಲು ಪ್ರೇರಣೆ ನೀಡಿ, ಹಲವಾರು ರೀತಿಯ ಅಪಮಾನ, ಅವಮಾನ ಸಹಿಸಿಕೊಂಡು, ದೇಶದ ಉನ್ನತಿಗಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ನೈತಿಕ ಮೌಲ್ಯ ನಿರ್ಮಾಣ, ರಾಷ್ಟ್ರದ ನಿರ್ಮಾಣದಲ್ಲಿ ಮಕ್ಕಳಿಗೆ ಉತ್ತಮ ಆರೋಗ್ಯಕರ, ಉದಾತ್ತವಾದ ಮೌಲ್ಯ ಹೇಳಿಕೊಟ್ಟು ಉತ್ತಮ ಸಮಾಜದ ನಿರ್ಮಾಣಕ್ಕೆ ಮಹಿಳೆಯರು ಮುಂದಾಗಲೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಇಲಾಖೆ ಅಧಿಕಾರಿ ಪದ್ಮಾವತಿ ಸಜ್ಜನ ಬೀದರ, ಚಿಟಗುಪ್ಪ ಪುರಸಭೆ ಸದಸ್ಯೆ
ಲಕ್ಷ್ಮೀಬಾಯಿ ಗಡಮಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ
ಭಾರತಿ ಪಾಟೀಲ್ ಮಾಡಗೋಳ, ಭಾರತಿ ಪಾಟೀಲ್ ಕೊಡಂಬಲ, ರೇಖಾ ಬಾಚಾ ಚಿಟಗುಪ್ಪ, ಸುಜಾತಾ ಮುಕಿಂದಪ್ಪನೂರ್ ಇಟಗಾ, ಸಿದ್ದಮ್ಮ ಮಠಪತಿ, ಜ್ಞಾನದೇವಿ ಮೇತ್ರೆ ಸೇರಿದಂತೆ ಮಹಿಳಾ ಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಪಡೆದ ಶರಣೆ ಮಲ್ಲಮ್ಮ ಆರ್ ಪಾಟೀಲರನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತು ಚಿಟಗುಪ್ಪ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿ ಯವರು ಸೇರಿದಂತೆ
ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ – ಸಂಗಮೇಶ ಎನ್ ಜವಾದಿ.