ಹನೂರು: ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ವಸತಿ ಸಚಿವ ವಿ ಸೋಮಣ್ಣ ಭೇಟಿ ನೀಡಿ ಮಲೆಮಹದೇಶ್ವರ ದರ್ಶನ ಪಡೆದರು. ನಂತರ ಪ್ರಾಧಿಕಾರದ ನೌಕರ ಕೆ ಮಹಾದೇವಸ್ವಾಮಿ ರವರು ತಮ್ಮ ಸ್ವಂತ ಹಣದಲ್ಲಿ ಗಣಪತಿ ದೇವಾಲಯ ಮುಂಭಾಗದಲ್ಲಿ ನಿರ್ಮಾಣ ಮಾಡಿರುವ ವಿನೂತನ ಮುಖ್ಯದ್ವಾರವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ವಿ ಸೋಮಣ್ಣ ಪ್ರಾಧಿಕಾರದ ನೌಕರ ಮಹದೇವಸ್ವಾಮಿರವರು 7 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮುಖ್ಯದ್ವಾರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕ್ಷೇತ್ರದ ಪವಾಡ ಪುರುಷ ಮಲೆ ಮಾದೇಶ್ವರ ಅವರಿಗೆ ಒಳಿತು ಮಾಡಲಿ ಎಂದು ಆಶಿಸಿದರು.
ನಂತರ ಬೆಳ್ಳಿ ರಥೋತ್ಸವ ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸೋಮಣ್ಣ ಆದಷ್ಟು ಶೀಘ್ರ ರಥೋತ್ಸವ ಕಾಮಗಾರಿ ಪೂರ್ಣಗೊಳಿಸಿ ಭಕ್ತರ ಅನುಕೂಲಕ್ಕೆ ಅವಕಾಶ ಕಲ್ಪಿಸಬೇಕು. ಮಲೆಮಹದೇಶ್ವರ ಬೆಟ್ಟಕ್ಕೆ ಇತ್ತೀಚಿನ ದಿನಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ .ಇವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಾದದ್ದು ಪ್ರಾಧಿಕಾರದ ಜವಾಬ್ದಾರಿ, ಅಧಿಕಾರಿಗಳು ತಮ್ಮ ಕಾರ್ಯವೈಖರಿಯನ್ನು ನಿಷ್ಠೆಯಿಂದ ಮಾಡಿದರೆ ತಮಗೂ ಸಹ ಒಳಿತಾಗಲಿದೆ. ನೌಕರರು ಸಂಬಳಕ್ಕಾಗಿ ದುಡಿಯುತ್ತಿದ್ದೇವೆ ಎಂದುಕೊಳ್ಳಬೇಡಿ ಮಲೆಮಾದೇಶ್ವರರ ಸೇವೆ ಮಾಡುತ್ತಿದ್ದೇವೆ ಎಂದು ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.