ಕೇಂದ್ರ ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನಧನ ಯೋಜನೆ, ವಯವಂದನ ಯೋಜನೆ, ರೋಜ್‌ಗಾರ್ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ಬಂದಿದೆ. ಈ ಯೋಜನೆಗಳ ಪೈಕಿ ಪಿಎಂಜೆಎವೈ ಅಥವಾ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಭಾರತದ ಸರ್ಕಾರದ ಅತೀ ದೊಡ್ಡ ಆರೋಗ್ಯ ಯೋಜನೆಯಾಗಿದೆ.ಆದರೆ ಈ ಯೋಜನೆಯ ಬಗ್ಗೆ ಅದೆಷ್ಟೋ ಮಂದಿಗೆ ಸಂಪೂರ್ಣವಾದ ಮಾಹಿತಿಯೇ ಇಲ್ಲ. ಆಯುಷ್ಮಾನ್ ಯೋಜನೆ ಎಂದರೇನು, ಅದರ ಮುಖ್ಯ ವಿಚಾರಗಳು ಏನಿದೆ, ಅರ್ಹತಾ ಮಾನದಂಡ ಏನಿದೆ, ಯಾವೆಲ್ಲ ದಾಖಲೆಗಳು ಬೇಕು ಎಂಬ ಮೊದಲಾದ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ… ಮುಂದೆ ಓದಿ…ಆಯುಷ್ಮಾನ್ ಭಾರತ್ ಯೋಜನೆಯು ಬಡವರಿಗೆ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಲಿ ಎಂಬ ಉದ್ದೇಶದಿಂದ ಭಾರತ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ಇದು ನಗದುರಹಿತ ಆಸ್ಪತ್ರೆ ಸೌಲಭ್ಯವನ್ನು ಪಡೆಯುವ ಯೋಜನೆಯಾಗಿದೆ. ನಾವು ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡರಲ್ಲೂ ಯೋಜನೆಯ ಸದುಪಯೋಗ ಪಡೆಯಬಹುದು. ಇದು ಆರೋಗ್ಯ ವಿಮೆ ಯೋಜನೆಗೆ ಸಮಾನವಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗುವ ಮುನ್ನ ತಗುಲುವ ಖರ್ಚು, ಔಷಧಿ, ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಬಳಿಕ ನೀಡಲಾಗುವ ಚಿಕಿತ್ಸೆಯ ಖರ್ಚು ಮೊದಲಾದವುಗಳನ್ನು ಈ ವಿಮೆಯಲ್ಲಿ ಒಳಗೊಳ್ಳುತ್ತದೆ. ಇನ್ನು ಮೊಣಕಾಲು ಆಪರೇಷನ್, ಹೃದಯ ಸರ್ಜರಿ ಮೊದಲಾದವುಗಳ ವೆಚ್ಚವನ್ನು ಕೂಡಾ ಈ ಯೋಜನೆ ಮೂಲಕ ಭರಿಸಬಹುದು.
ಆಯುಷ್ಮಾನ್ ಭಾರತ್ ಯೋಜನೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡರಲ್ಲೂ ಒಂದು ಕುಟುಂಬವು ವಿಮೆ ಮೂಲಕ ಸುಮಾರು 5 ಲಕ್ಷ ರೂಪಾಯಿಯ ಚಿಕಿತ್ಸೆಯನ್ನು ಪಡೆಯಲು ಅವಕಾಶವನ್ನು ನೀಡುತ್ತದೆ.
- ಈ ಯೋಜನೆಯನ್ನು ಪ್ರಮುಖವಾಗಿ ಇಂಟರ್‌ನೆಟ್ ಅಥವಾ ಆನ್‌ಲೈನ್ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಿರುವ, ಬಡತನದಲ್ಲಿರುವ ಜನರಿಗಾಗಿ ಜಾರಿ ಮಾಡಲಾಗಿದೆ.
- ಈ ಯೋಜನೆಯ ಫಲಾನುಭವಿಗಳು ಯಾವುದೇ ಹಣವನ್ನು ಪಾವತಿ ಮಾಡದೆಯೇ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ.
- ಪ್ರತಿ ವರ್ಷ ಸುಮಾರು 6 ಕೋಟಿಯಷ್ಟು ಭಾರತೀಯರು ಅನಿಶ್ಚಿತವಾಗಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದಾಗಿ ಮಧ್ಯಮ ವರ್ಗದಿಂದ, ಬಡವರ್ಗಕ್ಕೆ ಇಳಿಯುತ್ತಿದ್ದಾರೆ. ಜನರು ಈ ರೀತಿ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
- ಆಸ್ಪತ್ರೆಯಲ್ಲಿ ದಾಖಲಾಗುವ ಮೂರು ದಿನದ ಮುಂಚಿನ ಖರ್ಚು ವೆಚ್ಚಗಳು ಹಾಗೂ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ 15 ದಿನಗಳವರೆಗಿನ ಖರ್ಚು ವೆಚ್ಚವು ಈ ಯೋಜನೆಯಲ್ಲಿ ಒಳಗೊಳ್ಳುತ್ತದೆ.
- ಒಂದು ಕುಟುಂಬದ ಗಾತ್ರದ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗೆಯೇ ವಯಸ್ಸಿನ ಮಿತಿಯೂ ಕೂಡಾ ಇಲ್ಲ.