ಅನುಸಂಧಾನದ ಪಾಲು ನಮಗೆಲ್ಲ
ಮುಖಾಮುಖಿ ಸಂಧಿಸಲೆಂದೇ ಧಮ್ಮ ಭುವಿಗೆಲ್ಲಾ
ಶಶಿ ನೇಸರನಂತೆ ಬುದ್ಧ ಬಂದಿದ್ದಾನೆ
ನಮ್ಮನುದ್ದರಿಸಲು ಎದ್ದು ಬಂದಿರಬಹುದು
ನಾನು ಯುದ್ಧವಂತು ಬೇಡವೆಂದೆ
ಕ್ರಾಂತಿಯಿಂದ ಕಾದಾಡುವುದು ಬುದ್ಧನನ್ನು ಕೊಂದಂತೆ
ಶಾಂತಿ ಬಯಸದ ದೈತ್ಯಕಾರದ
ಯುದ್ಧದ ಕೇಡು ಉಕ್ರೆನ್ ನೋಡಿದಂತೆ
ರಕ್ತಮಂಡಲ ಮಾಸದ ಕಲೆಗಳು
ಬೊಧಿಮಂಡಲದ ನೆಲದೊಳಗೆ
ಇವೆಲ್ಲ ಬೇಡವೇ ಬೇಡ
ಬುದ್ಧನ ನಾಡಿನೊಳಗೆ ಖಡ್ಗ
ಆತ್ಮಹತ್ಯೆಗೆ ಶರಣಾಗಲಿ
ಖಡ್ಗದ ಮೊನೆಗೆ ಕ್ಷಾಮ ಬಂದು
ಅಸ್ತ್ರಗಳೆಲ್ಲ ನೆಲ ಕಚ್ಚಲಿ
ಬುದ್ಧನ ಅರಿವು-ಶರೀಫಜ್ಜನ ನಿಲುವು
ಬರಡು ಎದೆ ಹಸಿರಾಗಿಸಲಿ
ಶೋಕ ಸೃಷ್ಟಿಸುವ ಕೈಗೆ ರುಂಡವೆಲ್ಲ ಸಿಗದಂತೆ
ಖಡ್ಗಕ್ಕೂ ಬುದ್ದನೊಲಿಯಲಿ
ಕಾಡ ಕೂಸುಗಳೆಲ್ಲವೂ ಬುದ್ದನ ಮಕ್ಕಳೆಂದು
ಎದೆಗವಚಿ ಪ್ರೀತಿ ಬಾಚಲಿ
ಬಹುತ್ವದ ಬಂಧುತ್ವಕ್ಕೆ ಬುದ್ಧನ ಬೆಳದಿಂಗಳು
ಅನುರಣಿಸಿ ಪ್ರಖರತೆ ಮೂಡಲಿ
ಜಗದ ಭೋಗಕ್ಕೆ ಕರುಣೆ ಪ್ರೀತಿ ಸತ್ಯ
ಶಾಂತಿ ಎಂಬುದು ತಿಳಿಯಲಿ
ಬುದ್ಧನಿಲ್ಲದ ಮೇಲೆ ತಾರಾ ಸೂರ್ಯನಿಲ್ಲದ ನೀಲಿ ನಭಕೆ ಕಳೆ ಇರದು ತಿಳಿಯಲಿ
ಮತ್ತೆಂದಿಗೂ ಬಾಡದಂತೆ ಅರಳಿಯ ಬೇರಿನಂತೆ
ಸಮಾನತೆ ಎದೆಯೊಳಗೆ ಆಳಕ್ಕಿಳಿಯಲಿ
ಕೋಮುಗಲಭೆ ಅನಿಷ್ಟ ಅನಾಚಾರ
ಅಕುಶಲ ಅವಾಚ್ಯವಂತೂ ತೊಳೆದು ಹೋಗಲಿ
ಬೇಡವೇ ಬೇಡ ವಿಷದ ಬಟ್ಟಲು
ತುಟಿಯಂಚಿಗೆ ಒಡ್ಡುವುದು
ಅರಿವಿನ ಸಂಜ್ಞೆಯೊಳಗೆ
ಬುದ್ದನೆಂದರೆ ಜಗಬೆಳಗೊ ಬೆಳಕು ತಿಳಿಯಲಿ
-ಚನ್ನಪ್ಪ.ಎಸ್.ಬಾಗ್ಲಿ