ಸಿಂಧನೂರು.ಮಾ.26
ನಾಳೆಯಿಂದ ಅಂದರೆ ಮಾರ್ಚ್-27ರಿಂದ 5 ಮತ್ತು 8ನೇ ತರಗತಿಗಳಿಗೆ ರಾಜ್ಯ ಮಟ್ಟದ ಮೌಲ್ಯಾಂಕನ ಪರೀಕ್ಷೆಗಳು ನಡೆಯಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್ ತಿಳಿಸಿದ್ದಾರೆ.
ಅವರು ಈ ಕುರಿತು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಜ್ಯ ಮಟ್ಟದ ಮೌಲ್ಯಾಂಕನ ಪರೀಕ್ಷೆಗಳು ನಡೆಯುತ್ತಿವೆ. ದಿನಾಂಕ: 27-03-2023 ಸೋಮವಾರದಿಂದ ದಿನಾಂಕ: 01-04-2023 ಶನಿವಾರದವರೆಗೆ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ 4.30ರವರೆಗೆ ಮತ್ತು ಗುರುವಾರದಂದು ಮಾತ್ರ ಬೆಳಿಗ್ಗೆ: 10.30ರಿಂದ 12.30ರವರೆಗೆ ನಡೆಯುತ್ತವೆ.
ವಿಶೇಷತೆಗಳು : 5 ಮತ್ತು 8ನೇ ತರಗತಿಯ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ, ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು.
ಈ ಮೌಲ್ಯಾಂಕನವು ವಾರ್ಷಿಕ ಪರೀಕ್ಷೆಯಾಗಿರುವುದಿಲ್ಲ. ಇದು ಕೇವಲ ಮೌಲ್ಯಾಂಕನವಾಗಿರುತ್ತದೆ. ಈ ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ ಪ್ರಗತಿಗಳನ್ನು ತಿಳಿದುಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಕೊರತೆಯನ್ನು ನೀಗಿಸಲು ಮುಂದಿನ ದಿನಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಕ್ಕೆ ಇದೊಂದು ದಿಕ್ಸೂಚಿಯಾಗಲಿದೆ. ಈ ಅಂಶಗಳನ್ನು ವಿದ್ಯಾರ್ಥಿಗಳು, ಪಾಲಕರ-ಪೋಷಕರು ಅರಿತುಕೊಳ್ಳಬೇಕು. ಈ ಮೌಲ್ಯಾಂಕನದ ಫಲಿತಾಂಶವನ್ನು ಸಂಬಂಧಿಸಿದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು. ಆ ಮೂಲಕ ಫಲಿತಾಂಶದ ಗೌಪ್ಯತೆಯನ್ನು ಕಾಪಾಡಲಾಗುವುದು. ಪಠ್ಯಪುಸ್ತಕಗಳನ್ನು ಆಧರಿಸಿದ ಕಲಿಕಾಂಶಗಳಿಗೆ ಮಾತ್ರ ಮೌಲ್ಯಾಂಕನಕ್ಕೆ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಬಿ.ಆರ್.ಸಿ ಕೇಂದ್ರದ ಸಮನ್ವಯಾಧಿಕಾರಿ ಬಸಲಿಂಗಪ್ಪ ಮತ್ತು ಮೌಲ್ಯಾಂಕನ ಕಾರ್ಯಕ್ರಮದ ನೋಡಲ್ ಅಧಿಕಾರಿ ರವಿ ಪವಾರ್ ತಿಳಿಸಿದ್ದಾರೆ.
-ಕರುನಾಡ ಕಂದ