ಭದ್ರಾವತಿ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ :
ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಸೂಚನೆ
ಭದ್ರಾವತಿ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಏ.13ರಿಂದ ಚುನಾವಣಾಧಿಕಾರಿಗಳ ಕಚೇರಿ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು ಎಂದು ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ತಿಳಿಸಿದರು. ನಗರಸಭೆಯ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಏ.10ರಿಂದ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದ ನಾಮಪತ್ರ ಸ್ವೀಕರಿಸಲಾಗುವುದು. ವಿನಿ ವಿಧಾನಸೌಧ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗಳ ಕಚೇರಿ ತೆರೆಯಲಾಗಿದ್ದು, ಇಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಏ.20ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು.
ಏ.21 ನಾಮಪತ್ರ ಪರಿಶೀಲನೆ, ಏ.24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ.10ರಂದು ಮತದಾನ ನಡೆಯಲಿದ್ದು, ಮೇ.13ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.
ಅಭ್ಯರ್ಥಿಗಳು ಚುನಾವಣಾ ಅಕ್ರಮಗಳು ನಡೆಸದಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರಚಾರ ಕಾರ್ಯ ಕೈಗೊಳ್ಳಲು, ಸಭೆ-ಸಮಾರಂಭ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಕರಪತ್ರ ಸೇರಿದಂತೆ ಪ್ರಚಾರ ಸಾಮಗ್ರಿಗಳ ಕುರಿತು ಸಹ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲಗಳು ಇದ್ದಲ್ಲಿ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಪಕ್ಷದ ಪ್ರಮುಖರು ಮಾತನಾಡಿ, ಚುನಾವಣಾ ಅಕ್ರಮಕ್ಕೆ ಕಾರಣರಾದವರ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು. ವಿನಾಕಾರಣ ಸಂಬಂಧವಿಲ್ಲದವರ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಚುನಾವಣಾ ಆಯೋಗ ಚುನಾವಣೆಗೆ ನಿಗದಿಪಡಿಸಿರುವ ವೆಚ್ಚವನ್ನು ಮೀರಿ ಅಧಿಕ ವೆಚ್ಚ ಮಾಡುವ ಅಭ್ಯರ್ಥಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳು ಹಾಳಾಗಿದ್ದು, ದುರಸ್ತಿಪಡಿಸುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಮುಂದಾಗಬೇಕು. ಹಲವು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳನ್ನು ಬೇರೆ ಸ್ಥಳಕ್ಕೆ ನಿಯೋಜನೆಗೊಳಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಾದ ಆರ್. ಕರುಣಾಮೂರ್ತಿ, ಡಿ.ಸಿ ಮಾಯಣ್ಣ, ಆನಂದ್(ಮೆಡಿಕಲ್), ಟಿ. ಚಂದ್ರೇಗೌಡ, ಮೊಸರಹಳ್ಳಿ ಸುರೇಶ್, ಲೋಕೇಶ್ವರ್ ರಾವ್, ಶಶಿಕುಮಾರ್ ಗೌಡ, ಸುರೇಶಪ್ಪ, ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ತಹಶೀಲ್ದಾರ್ ಸುರೇಶ್ ಆಚಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಎಂ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.