ಭದ್ರಾವತಿ: ಸುಜ್ಞಾನನಿಧಿ ಶಿಷ್ಯವೇತನ ವಿದ್ಯಾರ್ಥಿಗಳ ಪಾಲಿಗೆ ಆಶಾ ಕಿರಣವಾಗಿದ್ದು, ಈ ಯೋಜನೆ ನೆರವಿನೊಂದಿಗೆ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ ಕೆ ನಾಗೇಂದ್ರಪ್ಪ ಕರೆ ನೀಡಿದರು.
ನಗರದ ಹೊಸಮನೆ ಮುಖ್ಯರಸ್ತೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭದ್ರಾವತಿ 2 ಯೋಜನಾ ಕಚೇರಿಯಲ್ಲಿ ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರದ ಯೋಜನೆಯ ವತಿಯಿಂದ ಮಾಸಿಕ ಶಿಷ್ಯವೇತನವನ್ನು ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರಾತಿ ಮಾಡಿದ್ದು ಸುಜ್ಞಾನನಿಧಿ ವಿದ್ಯಾರ್ಥಿ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರದಿಂದ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮವು ಒಂದು ಉತ್ತಮ ಕಾರ್ಯವಾಗಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಲ್ಲಿ ಮಹತ್ವದ ಪಾತ್ರವಹಿಸಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಜೀವನದಲ್ಲಿ ಉತ್ತಮ ಸಾಧನೆ ಮಾಡುವುದರ ಜೊತೆಗೆ ಶ್ರೀ ಕ್ಷೇತ್ರದ ಮಹತ್ತರವಾದ ಈ ಯೋಜನೆ ಸದ್ಭಳಕೆಯಾಗಬೇಕು ಎಂದು ತಿಳಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ ಎನ್ ಶ್ರೀಹರ್ಷ ರವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಎಲ್ಲ ವರ್ಗದ ಜನರಿಗೂ ಸಹಕಾರಿಯಾಗಿದೆ. ಸುಜ್ಞಾನನಿಧಿ ಶಿಷ್ಯವೇತನ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರ ಯೋಜನಾಧಿಕಾರಿ ಮಾಧವ ಗೌಡರು ಯೋಜನೆಯ ಕಾರ್ಯಕ್ರಮಗಳಲ್ಲಿ ಒಂದಾದ ಸುಜ್ಞಾನನಿಧಿ ಶಿಶ್ಯವೇತನದ ಕುರಿತು ಸವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ ಆನಂದ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಆರ್ ಕರುಣಾಮೂರ್ತಿ, ಸ್ಥಳೀಯ ಒಕ್ಕೂಟದ ಅಧ್ಯಕ್ಷರಾದ ಕೌಸರ್ ಬಾನು ಉಪಸ್ಥಿತರಿದ್ದರು.
ವೃತ್ತಿಪರ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು. ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸೌಮ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ : ಕೆ ಆರ್ ಶಂಕರ್ ಭದ್ರಾವತಿ