ಹನೂರು:ಅರಣ್ಯಕ್ಕೆ ಹೊಂದಿಕೊಂಡು ಜೀವನ ನಡೆಸಲು ಅನುಕೂಲವಂತೆ ಅರಣ್ಯ ವಾಸಿಗಳಿಗೆ ಸರ್ಕಾರ ಸಕಲ ಸವಲತ್ತುಗಳನ್ನು ಕಲ್ಪಿಸಿದೆಯಾದರೂ ಅದನ್ನು ಅನುಷ್ಟಾನಕ್ಕೆ ತರುವಲ್ಲಿ ಪ್ರಮಖ ಪಾತ್ರ ವಹಿಸಿರುವ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಮಾತ್ರ ಹೆಜ್ಜೆ ಹೆಜ್ಜೆಗೂ ಇನ್ನಿಲ್ಲದ ಕಾನೂನುಗಳನ್ನು ಸೃಷ್ಟಿಸಿಕೊಂಡು ಅನುಕೂಲಕ್ಕಿಂತ ಕಿರುಕುಳವನ್ನೇ ಹೆಚ್ಚು ನೀಡಿ ಅರಣ್ಯವಾಸಿಗಳ ಬದುಕು ಮೂರಾಬಟ್ಟೆಯಾಗುವಂತೆ ಮಾಡುತ್ತಿರುವುದು ಅವರ ನೆಮ್ಮದಿಗೆ ಭಂಗ ತರುತ್ತಿರುವುದಾಗಿ ಅರಣ್ಯ ವಾಸಿಗಳಿಂದ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ.
ಇಡೀ ಚಾಮರಾಜನಗರ ಜಿಲ್ಲೆಯಲ್ಲಿ ೧೪೮ ಪೋಡುಗಳಲ್ಲಿ ಸುಮಾರು ೮೫೦೦ ಕುಟುಂಬಗಳಲ್ಲಿ ೪೭,೦೦೦ ಜನಸಂಖ್ಯೆ ಇದ್ದು,ಬಿಳಿಗಿರಿ ರಂಗಸ್ವಾಮಿ ದೇವಸ್ಥಾನದ ಹುಲಿ ಯೋಜನೆ,ಬಂಡೀಪುರ ಹುಲಿ ಯೋಜನೆ ಹಾಗೂ ಕಾವೇರಿ ವನ್ಯಜೀವಿಧಾಮ ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ಮಹದೇಶ್ವರ ವನ್ಯಜೀವಿ ಧಾಮಗಳ ಪ್ರದೇಶದಲ್ಲಿ ಆದಿವಾಸಿಗಳ ಸಮುದಾಯವು ವಾಸವಾಗಿರುತ್ತದೆ.
ಅರಣ್ಯ ವಾಸಿಗಳು ನೆಮ್ಮದಿ ಜೀವನ ಸಾಗಿಸಲು ಅನುವಾಗುವಂತೆ ಚಾಮರಾಜನಗರ ಜಿಲ್ಲೆಯ ಐದು ತಾಲ್ಲೂಕುಗಳಿಂದ ೨೦೫೯ ಜನರಿಗೆ ಸುಮಾರು ೩,೫೦೦ ಎಕರೆ ಜಮೀನಿಗೆ ಸರ್ಕಾರದಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಿದ್ದು ಸದರಿ ಭೂಮಿಗಳಲ್ಲಿ ಹಿಂದಿನಿಂದ ಮಳೆಯಾಶ್ರಾಯಿತ ಒಣ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಆದರೆ ಅರಣ್ಯ ಇಲಾಖೆಯವರು ಅರಣ್ಯ ವಾಸಿಗಳಿಗೆ ನೀಡಿರುವ ಜಮೀನನ್ನು ಅರಣ್ಯ ವ್ಯಾಪ್ತಿಗೆ ಸೇರಿಸಿಕೊಳ್ಳಲು ಹುನ್ನಾರ ನಡೆಸಿ ಬೇಸಾಯದ ಜಮೀನುಗಳನ್ನು ಅರಣ್ಯದೊಳಗೆ ಸೇರಿಸಿಕೊಂಡು ಉಳಿದ ಖಾಸಗಿಯವರ ಜಮೀನುಗಳಿಗೆ ಆನೆ ಬರದಂತೆ ರೈಲ್ವೆ ಕಂಬಿಗಳನ್ನು ಅಳವಡಿಸುತ್ತಿರುವುದು ಅರಣ್ಯ ವಾಸಿಗಳಿಗೆ ಎಸಗಿದ ದೊಡ್ಡ ದ್ರೋಹ ಎಂದು ಅಲವತ್ತುಕ್ಕೊಳ್ಳುತ್ತಾರೆ.ಅರಣ್ಯಕ್ಕೆ ಅವಲಂಬಿತರಾಗಿ ಜೀವನ ನಡೆಸುತ್ತಿರುವುದರಿಂದ ಸರ್ಕಾರವು ಕುಟುಂಬವೊಂದಕ್ಕೆ ೨ ಎಕರೆ ಜಮೀನನ್ನು ನೀಡಿದ್ದು ಅದಕ್ಕೆ ಸಂಬಂಧಿಸಿದಂತೆ ಸದರಿಯವರುಗಳ ಹೆಸರಿಗೆ ಹಕ್ಕಪತ್ರವನ್ನು ಸಹ ನೀಡಿಲಾಗಿರುತ್ತದೆ ಆದರೆ ಕೆಲವು ಅರಣ್ಯಾಧಿಕಾರಿಗಳು ಇವರುಗಳಿಗೆ ಕೊಟ್ಟಿರುವ ಭೂಮಿಯಲ್ಲಿ ಯಾವುದೇ ರೀತಿಯ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದಕ್ಕಾಗಿ ಕೊಳವೆ ಬಾವಿ ಕೊರೆಸಲಾಗಲಿ ಬೆಳೆ ಬಂದ ಸಂದರ್ಭದಲ್ಲಿ ಕಾಡು ಪ್ರಾಣಿಗಳಿಂದ ಕೈಗೆ ಬಂದ ಬೆಳೆಯನ್ನು ಸಂರಕ್ಷಿಸಲು ಮಳೆ ಬಿಸಿಲಿಗೆ ಆಶ್ರಯವಾಗಿ ಗುಡಿಸಲು ಕಟ್ಟಿಕೊಳ್ಳಲಾಗಲಿ ಬಿಡದೆ ಇನ್ನಿಲ್ಲದ ಕಿರುಕುಳ ನೀಡಿ ಸರ್ಕಾರವೇ ಒಂದೆಡೆ ನೀಡಿರುವ ಅಧಿಕೃತ ಹಕ್ಕನ್ನು ಅರಣ್ಯಾಧಿಕಾರಿಗಳು ಮತ್ತೊಂದೆಡೆ ಕಸಿದುಕ್ಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಆದಿವಾಸಿಗಳ ಅಳಲು.
ಈ ಬಗ್ಗೆ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಕೊಳ್ಳೇಗಾಲ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್‌ರವರು,ಕೊಳವೆ ಬಾವಿ ಕೊರೆಸಲಾಗಲಿ ಇನ್ನಿತರೆ ಅಭಿವೃದ್ದಿಗೆ ಅರಣ್ಯ ಇಲಾಖೆಯಿದ ಅನುಮತಿ ಕಡ್ಡಾಯ ಎಂದು ಹೇಳುತ್ತಾರೆ.ಆದರೆ ಭಾರತೀಯ ಅರಣ್ಯ ಹಕ್ಕು ಕಾಯ್ದೆ ೨೦೦೬ ರಡಿಯಲ್ಲಿ ಸರ್ಕಾರವೇ ನೀಡಿರುವ ಜಿಲ್ಲಾಧಿಕಾರಿಗಳೇ ವಿತರಿಸಿರುವ ಹಕ್ಕುಪತ್ರಕ್ಕೆ ಮನ್ನಣೆಯಿಲ್ಲವೆ..? ಈ ಬಗ್ಗೆ ಸರ್ಕಾರದಿಂದ ಕೂಡಾ ಯಾವುದೇ ತಕರಾರಿನ ಸುತ್ತೋಲೆ ಇಲ್ಲ. ಆದಿ ವಾಸಿಗಳೂ ಕೂಡ ಈ ದೇಶದ ಪ್ರಜೆಗಳು ಎಂಬುದನ್ನು ಮನಗಾಣದ ಅರಣ್ಯ ಇಲಾಖೆಯವರಿಗೆ ಈ ಬಗ್ಗೆ ಇನ್ನಿಲ್ಲದ ಉಸಾಬಾರಿ ಯಾಕೆ ಎಂಬುದು ಅರಣ್ಯವಾಸಿಗಳ ಪ್ರಶ್ನೆ.
ಆದಿವಾಸಿಗಳು ಅನಾಧಿಕಾಲದಿಂದಲೂ ಅರಣ್ಯದ ಒಂದು ಭಾಗವಾಗಿಯೇ ಅಲ್ಲಿಯೇ ಉಳಿದು ಬದುಕು ಸವೆಸಿ ತಾವು ಬೆಳೆಯುವುದರ ಜತೆ ಜತೆಗೆ ಬೆಂಕಿ ಅವಘಡ ಸಂಭವಿಸಿದಂತಹ ಸಂದರ್ಭ ಸೇರಿದಂತೆ ನಾನಾ ವಿಧವಾಗಿ ಅರಣ್ಯವನ್ನು ಸಂರಕ್ಷಿಸಿ ಪೋಷಣೆ ಮಾಡಿಕೊಂಡು ಬಂದಿದ್ದಾರೆ.
ನಾಗರೀಕ ಸಮಾಜದ ಸೋಂಕಿಲ್ಲದ ವನ್ಯ ಜೀವಿಗಳ ಮದ್ಯೆ ವನ್ಯಜೀವಿಗಳಂತೆ ನಿಕೃಷ್ಟ ಬದುಕು ಸವೆಸುತ್ತಿರುವ ಆದಿ ವಾಸಿಗಳ ಮೇಲೆ ಕನಿಷ್ಟ ಮಾನವೀಯತೆಯನ್ನೂ ತೋರದೆ ಕೆಂಗಣ್ಣು ಬೀರಿರುವ ಅರಣ್ಯ ಇಲಾಖೆಯವರು ಅರೆ ಕಾಡುವಿನ ದೊಡ್ಡಿ, ವಿಎಸ್.ದೊಡ್ಡಿ, ಅಂಡೆ ಕುರುಬನ ದೊಡ್ಡಿ ಹಾಡಿಗಳಲ್ಲಿರುವ ಹಕ್ಕುಪತ್ರ ಆದಾರಿತ ಜಮೀನುಗಳನ್ನು ಅರಣ್ಯದೊಳಗೆ ಸೇರಿಸಿಕೊಂಡು ರೈಲ್ವೆ ಕಂಬಿ ಅಳವಡಿಸುವ ಅವ್ಶೆಜ್ಞಾನಿಕ ಕಾರ್ಯಕ್ಕೆ ಮುಂದಾಗಿರುವುದು ಆದಿ ವಾಸಿಗಳು ಮತ್ತು ಅರಣ್ಯ ಇಲಾಖೆಯವರ ನಡುವಿನ ಸಂಘರ್ಷಕ್ಕೆ ಮುನ್ನುಡಿಯಾಗಿದೆ. ಈ ಹಿನ್ನೆಲೆಯಲ್ಲಿ ಅರೆ ಕಾಡುವಿನ ದೊಡ್ಡಿಯಲ್ಲಿಯ ಆದಿವಾಸಿಗಳು ಐದು ದಿನಗಳಿಂದಲೂ ತಮ್ಮ ಜಮೀನಿನ ಬಳಿ ಧರಣಿ ಸತ್ಯಾಗ್ರಹದಲ್ಲಿ ತೊಡಗಿದ್ದಾರೆ ಜಿಲ್ಲಾಧಿಕಾರಿಗಳು ಕೂಡಲೇ ಮದ್ಯೆ ಪ್ರವೇಶಿಸಿ ಆದಿವಾಸಿಗಳಿಗೆ ನ್ಯಾಯ ಕೊಡಿಸದಿದ್ದಲ್ಲಿ ಅನಿರ್ಧಿಷ್ಟ ಸತ್ಯಾಗ್ರಹ ನಡೆಸುವುದಾಗಿ ಸೋಲಿಗ ಮುಖಂಡ ವಿ.ಎಸ್.ದೊಡ್ಡಿ ನಾಗಣ್ಣ ಮತ್ತು ಅರೆಕಡುವಿನ ದೊಡ್ಡಿ ಆದಿವಾಸಿಗಳು ಆಗ್ರಹಿಸಿದ್ದಾರೆ.ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಇದೇ ನಿಷ್ಕರುಣೆ ಧೋರಣೆ ಮುಂದುವರೆದಲ್ಲಿ ಆದಿವಾಸಿಗಳ ಎಲ್ಲಾ ಸಂಘಟನೆಗಳೊಂದಿಗೆ ಒಗ್ಗೂಡಿ ಉಘ್ರ ಹೋರಾಟ ನಡೆಸುವುದಾಗಿ ಅರಣ್ಯ ವಾಸಿ ಸೇವಾ ಟ್ರಸ್ಟ್ನ ಕಾರ್ಯಧ್ಯಕ್ಷ ಗಾಣ ಗಮಂಗಲ ನಾಗೇಂದ್ರ ಎಚ್ಚರಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಬಸ್‌ಗಳ ನಿರ್ವಹಣೆಯಲ್ಲಿ ವ್ಯಾಪಕ ಗೋಲ್ ಮಾಲ್..!
ಹತ್ತಾರು ವರ್ಷಗಳಿಂದ ಇದೇ ವಿಭಾಗದಲ್ಲಿರುವವನದೇ ಕಾರು ಬಾರು..!!
ಹನೂರು:ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರಕ್ಕೆ ಸೇರಿದ ಬಸ್ಸುಗಳ ನಿರ್ವಹಣೆಯಲ್ಲಿ ವ್ಯಾಪಕ ಗೋಲ್ ಮಾಲ್ ನಡೆದಿದ್ದು ನೂತನ ಬಸ್‌ಗಳ ಕವಚ ನಿರ್ಮಾಣ ಕಾರ್ಯ ಸೇರಿದಂತೆ ಚಾಲಕ ನಿರ್ವಾಹಕರ ಕ್ಲೀನರ್ ನಿಯೋಜನೆಯಲ್ಲೂ ನಿಯಮ ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಬಸ್ ಬಾಬತ್ತಿನ ಬಹುಪಾಲು ಆದಾಯ ದುರ್ಬಳಕೆಯಾಗುತ್ತಿದ್ದು ಇದಕ್ಕೆಲ್ಲಾ ಮೂಲ ಕಾರಣ ಹತ್ತಾರು ವರ್ಷಗಳಿಂದಲೂ ಇದೇ ವಿಭಾಗದಲ್ಲಿ ದ್ವಿ.ದ.ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ನಾಲ್ಕಾರು ವರ್ಷಗಳಿಂದ ವ್ಯವಸ್ಥಾಪಕನಾಗಿ ಮುಂಬಡ್ತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿರುವ ಮಾದರಾಜೇ ಅರಸು ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ.ಮಲೆಮಹದೇಶ್ವರ ಬೆಟ್ಟಕ್ಕೆ ವಿವಿದೆಡೆಗಳಿಂದ ಆಗಮಿಸುವ ಭಕ್ತರಿಗಾಗಿ ಪ್ರಾಧಿಕಾರದ ವತಿಯಿಂದ ೫೦ ವರ್ಷಗಳ ಹಿಂದಿನಿಂದಲೂ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಂಡು ಬರಲಾಗುತ್ತಿದೆ ಈ ಹಿಂದೆ ಸುಮಾರು ೧೪ ಬಸ್‌ಗಳು ಚಾಲನೆಯಲ್ಲಿ ಇದ್ದವು. ಪ್ರಾಧಿಕಾರ ಪ್ರಾರಂಭವಾದ ನಂತರ ಬಸ್ ವಿಭಾಗದಲ್ಲಿ ಈ ಹಿಂದೆ ಖರೀದಿಸಲಾಗಿದ್ದ ಬಸ್ಸುಗಳನ್ನು ಆಗಾಗ್ಗೆ ಬದಲಾಯಿಸದೆ ನಿಗಧಿತ ಕಾಲಾವಧಿಯಲ್ಲಿ ಎಫ್.ಸಿಯನ್ನೂ ಮಾಡಿಸದೆ ಬಸ್ಸುಗಳ ಬಣ್ಣ,ದುರಸ್ಥಿಯನ್ನು ಮಾಡಿಸದೆ ಆರ್.ಟಿ.ಓ ಅಧಿಕಾರಿಗಳಿಗೆ ದೇವಸ್ಥಾನದ ಲಾಡುಗಳನ್ನು ಕೊಟ್ಟು ಯಥಾ ಸ್ಥಿತಿಯಲ್ಲೇ ಎಫ್.ಸಿ ಚಾಲನೆಯಾಗುವಂತೆ ಮಾಡಿರುವುದರಿಂದ ಬಸ್ಸುಗಳು ತುಂಬಾ ಕೆಟ್ಟಿರುವುದಲ್ಲದೆ ಚಾಲನೆಗೂ ಯೋಗ್ಯ ಇಲ್ಲದಂತಾಗಿ ತುಕ್ಕು ಹಿಡಿಯುವ ಹಂತದಲ್ಲಿ ಮೂಲೆ ಗುಂಪಾಗಿ ಗುಜರಿ ಸೇರುವಂತ ಹಂತದಲ್ಲಿದ್ದವು ಇದೀಗ ಒಂದು ವಾರಗಳ ಹಿಂದಷ್ಟೆ ಅವುಗಳ ಬಾಡಿ ಬಿಲ್ಡಿಂಗ್ ಮತ್ತಿತರೆ ದುರಸ್ಥಿ ಕೆಲಸಗಳಿಗೆ ತಮಿಳುನಾಡಿನ ಕರೂರಿಗೆ ಕಳುಹಿಸಿರುವುದರಲ್ಲೂ ಹಗರಣದ ವಾಸನೆ ಕಂಡು ಬರುತ್ತಿದೆ.
೨೦೧೪ರಲ್ಲಿ ಮಲೆಮಹದೇಶ್ವರ ಸ್ವಾಮಿ ದೇಗುಲ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದ ಸಂದರ್ಭದಲ್ಲಿ ಪ್ರಪ್ರಥಮ ಅಧ್ಯಕ್ಷರಾದ ಇಂದಿನ ಹಾಗೂ ಅಂದಿನ ಮುಖ್ಯ ಮಂತ್ರಿಯಾಗಿದ್ದ ಸಿದ್ಧರಾಮಯ್ಯನವರೇ ೪ ಹೊಸ ಬಸ್ಸುಗಳನ್ನು ಬಿಡುಗಡೆಗೊಳಿಸಿ ಉದ್ಘಾಟನೆ ಮಾಡಿ ಇನ್ನೂ ೮ ಬಸ್ಸುಗಳನ್ನು ಅಂದಿನ ಖರೀದಿಸುವುದಾಗಿ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರಾದರೂ ಯಾಕೋ ಏನೋ ಆ ಕಾರ್ಯ ನಡೆಯಲೇ ಇಲ್ಲ.
ಮೈಸೂರು,ಬೆಂಗಳೂರು,ಚಾಮರಾಜನಗರ, ಮಂಡ್ಯ,ಹೊಗೆನಕಲ್,ಭಾಗದಿಂದ ಸಾವಿರಾರು ಸಂಖ್ಯೆಯಷ್ಟು ಭಕ್ತರು ಆಗಮಿಸುತ್ತಿದ್ದರೂ ಇರುವ ಪರ್ಮಿಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಮೈಸೂರಿನ ಲೈನ್,ನಂಜನಗೂಡಿನ ಲೈನ್, ಸುತ್ತೂರಿನ ಲೈನ್,ಆದಿ ಚುಂಚನಗಿರಿ ಲೈನ್ ಹೀಗೆ ಸಂಚರಿಸುತ್ತಿದ್ದ ೧೨ ಬಸ್ಸುಗಳಲ್ಲಿ ಎಲ್ಲಾ ಬಸ್ಸುಗಳ ಸಂಚಾರ ಸ್ಥಗಿತಗೊಂಡು ಇದೀಗ ಬೆಂಗಳೂರಿಗೆ ೩ ಹಾಗೂ ಗುಂಡ್ಲುಪೇಟೆಗೆ ಒಂದು ಬಸ್ಸು ಮಾತ್ರ ಚಾಲನೆಯಲ್ಲಿರುತ್ತದೆ.
ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಕವಚ ನಿರ್ಮಿಸಿದ್ದರೆ ದೀರ್ಘ ಕಾಲ ಬಾಳಿಕೆ ಬರುತ್ತಿತ್ತು ಮತ್ತು ಸದೃಢವಾಗಿಯೂ ಇರುತ್ತಿತ್ತು ಎಂಬ ಬೇಸರದ ಮಾತುಗಳು ಬಸ್ ಸಿಬ್ಬಂದಿಗಳಿಂದಲೇ ಕೇಳಿ ಬರುತ್ತಿವೆ ಈ ಬಗ್ಗೆ ತನಿಖೆ ನಡೆಸಿದರೆ ಅಕ್ರಮ ಬೆಳಕಿಗೆ ಬರುವುದು ನಿಶ್ಚಳವಾಗಿದ್ದು ನೂತನ ಕಾರ್ಯದರ್ಶಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವರೇ ಕಾದು ನೋಡಬೇಕಿದೆ.
ಬಸ್ ವಿಭಾಗದ ವ್ಯವಸ್ಥಾಪಕನ ದುರಾಡಳಿತದಿಂದಾಗಿ ಬಸ್‌ಗಳ ಚಾಲಕ ನಿರ್ವಾಹಕ ಕ್ಲೀನರ್‌ಗಳನ್ನು ತನಗೆ ಬೇಕಾದವರನ್ನು ತನ್ನನ್ನು ಗಮನಿಸಿಕೊಂಡವರನ್ನು ನಿಯೋಜಿಸಿಕೊಂಡು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ರಾಜ್ಯಭಾರ ನಡೆಸುತ್ತಿರುವುದಾಗಿ ದೂರಲಾಗಿದೆ.ಈ ಹಿಂದೆ ೨೦೧೭-೧೮ರಲ್ಲಿ ಪ್ರಾಧಿಕಾರದ ಬಸ್ ಕ್ಲೀನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಮೂರ್ತಿ ಎಂಬಾತನ್ನು ಇದೇ ಅರಸು ನಿಯಮ ಬಾಹಿರವಾಗಿ ನಿರ್ವಾಹಕನಾಗಿ ಕಳುಹಿಸಿದ್ದಾಗ ಬಸ್ ಮಳವಳ್ಳಿಯಿಂದ ಕನಕಪುರ ಮಾರ್ಗವಾಗಿ ತೆರಳುತ್ತಿದ್ದಾಗ ಸುಮಾರು ೨೫ ಪ್ರಯಾಣ ಕರಿಂದ ಹಣ ಪಡೆದು ಕೂಡಾ ಟಿಕೆಟ್ ನೀಡದೆ ಹಣ ದೋಚಿರುವುದು ಪತ್ತೆಯಾಗಿ ಅಂದಿನ ಪ್ರಾಧಿಕಾರದ ಕಾರ್ಯದರ್ಶಿ ರೂಪಾರವರು ಶಿವಮೂರ್ತಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದರು ತದ ನಂತರದಲ್ಲಿ ಕೆಲ ಕಾಲ ಅಜ್ಞಾತನಾಗಿಯೇ ಉಳಿದಿದ್ದ ಶಿವಮೂರ್ತಿಯನ್ನು ಈ ವ್ಯವಸ್ಥಾಪಕ ತನ್ನ ಕರಾಮತ್ತಿನಿಂದ ತದ ನಂತದ ಬದಲಾದ ಕಾರ್ಯದರ್ಶಿಯವರ ಗಮನಕ್ಕೂ ಬಾರದೆ ಒಳಗೊಳಗೆ ಮತ್ತೆ ಕೆಲಸಕ್ಕೆ ನಿಯೋಜನೆಗೊಳಿಸಿಕೊಂಡು ಇದೀಗ ಬೇನಾಮಿ ವ್ಯವಸ್ಥಾಪಕನಂತೆ ಶಿವಮೂರ್ತಿ ಒಳಗೆ ಬಸ್ ವಿಭಾಗದ ಎಲ್ಲಾ ವಿಭಾಗಗಳಲ್ಲೂ ವಿರಾಜಮಾನನಾಗಿ ‘ಸೆಕೆಂಡ್ ಮ್ಯಾನೇಜರ್’ ಎಂದೇ ಪ್ರಸಿದ್ದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಾಧುರಾಜ್‌ನ ಬಲಗೈ ಬಂಟನಾಗಿದ್ದಾನೆ.
ಈಗಲಾದರೂ ನೂತನ ಕಾರ್ಯದರ್ಶಿಯವರು, ಮೇದು ಕೊಬ್ಬಿರುವ ಬಸ್ ವಿಭಾಗದ ಹೆಗ್ಗಣಗಳ ಅಪರಾ ತಪರಾಕ್ಕೆ ಕಡಿವಾಣ ಹಾಕಿ ಬಸ್ ವಿಭಾಗದಿಂದ ಇವರುಗಳನ್ನು ಬೇರೆ ವಿಭಾಗಕ್ಕೆ ಎತ್ತಂಗಡಿ ಮಾಡಿ ಬಸ್ ವಿಭಾಗವನ್ನು ಸುಧಾರಣೆ ಮಾಡದಿದ್ದಲ್ಲಿ ಇನ್ನಷ್ಟು ಅವಾಂತರಗಳು ಸೃಷ್ಟಿಯಾಗಿ ಇವರಿಗೆ ಕೆಟ್ಟ ಹೆಸರು ಬರುವುದರಲ್ಲಿ ಯಾವುದೇ ಸಂಶಯವಿಲ್ಲ.
ವರದಿ ಉಸ್ಮಾನ್ ಖಾನ್