ತರಗುಡುತ್ತಿರುವ ಕಾಲುಗಳು ಮಂಜಾಗುತ್ತಿರುವ ಕಣ್ಣುಗಳು
ಸೋತು ಸುಸ್ತಾಗಿರುವ ದೇಹ
ಬಳಲಿ ಬೆಂಡಾದ ಆತ್ಮ
ಮತ್ತಷ್ಟು ದುಗುಡ ದುಮ್ಮಾನ ಪ್ರಾಣ ಸಂಕಟ
ಕೊರಗುತ್ತಿದೆ ಮನಸ್ಸು ನರಳುತ್ತಿದೆ ಹೃದಯ
ಬದುಕಿ ಸಾಯುತ್ತಿರುವೇನೋ?ಕೊಂಡಿಗೆ ನೇತು ಬಿದ್ದಿನೋ?ಗೊಂದಲ ತಳಮಳ
ಹೇಳುವಂತಿಲ್ಲ ಕೇಳುವಂತಿಲ್ಲ ಅನುಭವಿಸುವುದಷ್ಟೇ
ಬೆಳಗಾದರೆ ಭಯ ಹೆಜ್ಜೆ ಬಿಡಬೇಕಲ್ಲ
ಕೊನೆ ನಡಿಗೆಗೆ
ಸಂಭ್ರಮ ಸಡಗರ ಊರ ತುಂಬೆಲ್ಲ ಹಬ್ಬ
ಕೊಂಚವು ಬಿಡುವು ಕೊಡದ ವರುಣ
ಮಕ್ಕಳಾದಿಯಾಗಿ ಎಲ್ಲರಿಗೂ ಸಿಟ್ಟು ಸಿಡುಕು
ವರುಣನ ಕಾಟ ಹಠ ಬಿಡದ ಶಿಷ್ಯ ಬಳಗ
ವಾದ್ಯಗಳ ಮೇಲಾಟ ಪಟಾಕಿ ಸದ್ದು
ದ್ಯಾವಮ್ಮಗೆ ಪೂಜೆ ಸರೋಟಿಗೆ ಹಾರ
ಕೇಕೆ ಶಿಳ್ಳೆ ಚಪ್ಪಾಳೆಗಳ ಝೆoಕಾರ
ಆಪ್ತತತೆ ವಿಧೇಯತೆಗೆ ರಥವೇರಿದೆ.
ದ್ವಿ ಗ್ರಾಮದಲ್ಲಿ ಹೊರಟಿತು ಮೆರವಣಿಗೆ
ಕಣ್ಣರಳಿಸಿ ಕುತೂಹಲದಿ
ನೋಡುವ ದಾರಿಹೋಕರು
ಶ್ರೀಮಂತರ ದಿಬ್ಬಣವೆಂದುಕೊಂಡು ಹಲವರು
ಬೆಕ್ಕಸ ಬೆರಗಾಗಿ ನೋಡಿದವರು ಉಂಟು
ಮೈಯಲ್ಲಾ ಒದ್ದೆಯಾದರೂ ಕದಲದ ಜನರು
ಕಂಡುಂಡ ಅನುಭವವ ಸ್ಮೃತಿಗೈದರು
ಎಲ್ಲರ ಬಾಯಲ್ಲಿ ಒಂದೇ ಮಾತು
ಪಾಪ ಹೋಗಬಾರದಿತ್ತು ಒಳ್ಳೆ ಮೇಷ್ಟು
ದುಃಖ ಮಡುಗಟ್ಟಿದರು ಪ್ರೀತಿಯ ಭಾವ
ಒಂದೆಡೆ ದೂರವೆನ್ನುವ ಹೃದಯ ರೋಧನ
ಮತ್ತೊಂದೆಡೆ ಅವರಿಗೂ ಕುಟುಂಬವಿಲ್ಲವೇ?
ಎನ್ನುವ ಆತ್ಮ ಪ್ರಶ್ನೆ…
ಸಾಗಿತ್ತು ಮೆರವಣಿಗೆ
ದ್ವಂದ್ವ ತಳಮಳಗಳ ಮಧ್ಯೆ
ಪಟ್ಟುಬಿಡದ ಶಿಷ್ಯ ಬಳಗ
ಪತ್ನಿಗೂ ರಥವೇರಿಸಿದರು
ಅಂತ್ಯವಾಯಿತು ಮೆರವಣಿಗೆ
ಕಿತ್ತಿತು ಕಣ್ಣೀರಿನ ಕೋಡಿ
ಯಾವ ಜನ್ಮದ ಫಲವೋ
ಯಾವ ಋಣವೋ
ಅರಿಯದೇ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ
ಕಟುಕನು ಕೂಡ ತನ್ನ ಕುತ್ತಿಗೆ ಕೊಯ್ದುಕೊಳ್ಳಬಲ್ಲ
ಸಿನಿಮಾವಲ್ಲ ತೊರ್ಪಡಿಕೆಯಲ್ಲ ಹೆಸರಿಗಲ್ಲ
ಆ ದೃಶ್ಯ ಜಗತ್ತನೇ ಅಳಿಸಿ ನಡುಗಿಸಬಲ್ಲದು
ನೆನಸಿಕೊಂಡರು ಮೈ ಜುಮ್ಮೆನ್ನುವುದು
ಬಂಗಾರದ ಮನಸ್ಸುಗಳಲ್ಲಿ ಎಂಥಹ ಭಕ್ತಿ
ಮೊಣಕಾಲು ಊರಿ ಅಂಗೈ ಚಾಚಿ
ರಸ್ತೆ ಮಾಡಿದರು
ಶಿಷ್ಯರ ಅಂಗೈ ಗುರುಗಳ
ಪಾದಕ್ಕೆರಸ್ತೆಯಾಗಿತ್ತು
ಶೋಕದ ನಡಿಗೆಗೆ ಭಾವನೆಗಳೇ ಜೊತೆಗಾರ
ಎಲ್ಲವೂ ಕೊನೆ ಎಂಬ ಘಂಟೆ ಬಾರಿಸುತ್ತಿತ್ತು
ಭೋರ್ಗರೆದ ಮಳೆ ಕೂಡ ಒಮ್ಮೆಲೆ ನಿಂತಿತು
ರಾಜ ಸಿಂಹಾಸನ ಭವ್ಯ ವೇದಿಕೆ ಏನಿದ್ದರೇನು
ಹೊರಗೆ ಚುಚ್ಚುವ ಮುಳ್ಳು
ಒಳಗೆ ಮೆತ್ತಗಿನ ಹಾಸಿಗೆ
ಹಾರುವ ದೀಪಕ್ಕೆ ಮತ್ತಷ್ಟು
ಎಣ್ಣೆ ಬತ್ತಿ ಉಪಚಾರ
ಶಿಷ್ಯರ ಸಾಧನೆಯ ಮಾತು
ಜನರ ಉಪಕಾರ ಸ್ಮರಣೆ
ಹದಿನಾರು ಸಂವತ್ಸರ ಕಣ್ಣಿಗೆ ಕಟ್ಟಿತು
ಸುಖ ದುಃಖ ನೋವು ನಲಿವು ಸಿಹಿ ಕಹಿ
ಒಳಿತು ಕೆಡಕು ಒಂದೇ ಸಮನೆ ಹೊರಬಿದ್ದವು
ನನಗೆ ಅನಿವಾರ್ಯ ಅವರಿಗೆ ಅದಮ್ಯ ಪ್ರೀತಿ
ಪುನರ್ಜನ್ಮವಿದ್ದರೆ ಅಲ್ಲೆ ಗುರುವಾಗಲಿ
ನೀರವ ಮೌನದೊಂದಿಗೆ ಹೆಜ್ಜೆ ಕೊನೆಗೊಂಡಿತು.
-ಚೌಡ್ಲಾಪುರ ಸೂರಿ