ಚಾಮರಾಜನಗರ/ಗುಂಡ್ಲುಪೇಟೆ:ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬಿ.ಜೆ.ಪಿ,ರೈತಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್ ಗೆ ಗುಂಡ್ಲುಪೇಟೆಯಲ್ಲಿ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆಯಿಂದಲೆ ಕನ್ನಡಪರ ಮತ್ತು ರೈತ ಸಂಘಟನೆಗಳ ಮುಖಂಡರು ಅಲ್ಲಲ್ಲಿ ತೆರೆದಿದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು,ಕೆ.ಎಸ್ ಆರ್ ಟಿ.ಸಿ ಮತ್ತು ಖಾಸಗಿ ವಾಹನ ಸಂಚಾರ ಇಲ್ಲದೆ
ಸಾರ್ವಜನಿಕರ ಓಡಾಟ ಇಲ್ಲದೆ ಪಟ್ಟಣದ ಪ್ರಮುಖ ವ್ಯಾಪಾರ ನಡೆಸುವ ಹಳೇ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಬೀಕೋ ಎನ್ನುತಿತ್ತು.
ಮಾಜಿ ಶಾಸಕ ನಿರಂಜನ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ:ಮಂಡಲ ಬಿಜೆಪಿ ವತಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದ ಬೈಕ್ ನಲ್ಲಿ ಹೊರಟ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು ನಂತರ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಮಾತನಾಡಿದ ಮಾಜಿ ಶಾಸಕ ನಿರಂಜನ್ ಕುಮಾರ್ ರಾಜ್ಯ ಕಾಂಗ್ರೆಸ್ ಸರ್ಕಾರ ಟ್ರಿಬ್ಯೂನಲ್ ಆದೇಶ ಮಾಡುವ ಮುನ್ನವೇ ತಮಿಳುನಾಡಿಗೆ ನೀರು ಹರಿಸಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ವಿರೋಧಪಕ್ಷ ವಾಗಿದ್ದ ಸಂದರ್ಭದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂದು ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದವರು ತಮಿಳುನಾಡಿಗೆ ನೀರು ಹರಿಸುವ ಮೂಲಕ ನೀರು ಕೇಳುವ ಹಕ್ಕನ್ನೆ ಕಳೆದುಕೊಂಡಿದ್ದೇವೆ ಈಗಾ ನಮ್ಮ ನೀರು ಇಲ್ಲ ನಮ್ಮ ಹಕ್ಕು ಇಲ್ಲ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ತೀವ್ರ ಬರಗಾಲ ಇರುವ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಹಾಗೆ ನೀವು ಒಂದು ಗಟ್ಟಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು ಇದಕ್ಕೆ ರಾಜ್ಯದ ಜನ ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸುತ್ತಾರೆ ಆದರೆ ನೀವು ಅಧಿಕಾರವನ್ನು ಉಳಿಸಿಕೊಳ್ಳುವದತ್ತ ಗಮನ ಹರಿಸುತಿದ್ದು ನಿಮಗೆ ರೈತರ ಹಿತಕಿಂತ ಅಧಿಕಾರ ಮುಖ್ಯವಾಗಿದೆ ಎಂದು ಟೀಕಿಸಿದರು.
ತಮಿಳು ಸಂಘದ ಅಧ್ಯಕ್ಷ ಬಾಲನ್ ಮಾತನಾಡಿ ನಮಗೆ ನೀರು ಇಲ್ಲದ ಸಮಯದಲ್ಲಿ ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರು ಹರಿಸುತ್ತಿರುವುದು ಸರಿಯಲ್ಲ ಕೂಡಲೇ ನಮ್ಮ ರಾಜ್ಯದ ರೈತರ ಹಿತದೃಷ್ಟಿಯಿಂದ ಕೂಡಲೇ ನೀರು ಹರಿಸುತ್ತಿರುವುದನ್ನ ನಿಲ್ಲಿಸಬೇಕು ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬರಗಾಲದ ಸಂಧರ್ಭದಲ್ಲಿ ಸಂಕಷ್ಟ ಸೂತ್ರವನ್ನು ಸಿದ್ದಪಡಿಸಬೇಕೆಂದು ಆಗ್ರಹಿಸಿದರು.
ರೈತಸಂಘ,ಎಸ್ ಡಿ ಪಿ ಐ ಮತ್ತು ಕಾವಲುಪಡೆ ಪ್ರತ್ಯೇಕವಾಗಿ ಪ್ರತಿಭಟನೆ:ಎಂ ಡಿ ಸಿ ಸಿ ಬ್ಯಾಂಕ್ ವೃತ್ತದ ಬಳಿ ಮಾನವ ಸರಪಳಿ ರಚಿಸಿ ಮಾತನಾಡಿದ ರೈತ ಮುಖಂಡ ಶಿವಪುರ ಮಹಾದೇವಪ್ಪ ಶಾಸಕರು ಮತ್ತು ಸಂಸದರ ವಿರುದ್ಧ ಘೋಷಣೆ ಕೂಗಿ ಸಂಸದ ನಿಯೋಗ ಶೀಘ್ರದಲ್ಲೇ ಪ್ರಧಾನಿಯವರನ್ನು ಭೇಟಿ ಮಾಡಿ ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣ ಬಹುತೇಕ ಸ್ತಬ್ಧ:ಪ್ರಮುಖ ವಾಣಿಜ್ಯ ಸ್ಥಳಗಳಾದ ಹಳೆ ಬಸ್ ನಿಲ್ದಾಣ,ಕೆ.ಆರ್.ಸಿ.ರಸ್ತೆ, ಮತ್ತು ಕೆ.ಎಸ್ ಆರ್ ಟಿ ಸಿ ನಿಲ್ದಾಣಗಳ ಅಂಗಡಿ ಮಳಿಗೆ ಮಾಲೀಕರು ಮತ್ತು ಪುಟ್ ಪಾತ್ ವ್ಯಾಪಾರಿಗಳು ಬಂದ್ ಗೆ ಬೆಂಬಲ ಸೂಚಿಸಿ ಯಾವುದೇ ವ್ಯಾಪಾರ ವಹಿವಾಟು ನಡೆಯದೆ ಸ್ತಬ್ಧವಾಗಿತ್ತು.