ಯಾದಗಿರಿ:ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು,ಬೆಳೆ ಸಮೀಕ್ಷೆ ಕುರಿತ ಎಲ್ಲಾ ರೈತರ ಸಂಪೂರ್ಣ ಮಾಹಿತಿಯನ್ನು ಮುಂದಿನ 10 ದಿನಗಳಲ್ಲಿ ಮುಗಿಸಿ “ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿ,ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಯಾದಗಿರಿಯಲ್ಲಿ ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ರಾಜ್ಯ ಈ ವರ್ಷ ಇತಿಹಾಸ ಕಾಣದ ಬರಕ್ಕೆ ತುತ್ತಾಗಿದೆ ಮಳೆ ಇಲ್ಲದ ಕಾರಣ ರೈತರು ಪರಿತಪಿಸುವಂತಾಗಿದೆ ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ”ಎಂದು ಕಿವಿಮಾತು ಹೇಳಿದರು.
ಮುಂದುವರೆದು ಅಧಿಕಾರಿಗಳು ಯಾದಗಿರಿಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ನಡೆಸಿದ್ದೀರಿ.2015-16ರ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 2.30 ಲಕ್ಷ ರೈತರಿದ್ದಾರೆ ಆದರೆ 1.80 ಲಕ್ಷ ರೈತರ ಮಾಹಿತಿ ಮಾತ್ರ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಉಳಿದ 80 ಸಾವಿರ ರೈತರ ಬೆಳೆ ಮಾಹಿತಿ ಏಕೆ ಮಾಡಿಲ್ಲ?ಎಂದು ಸಚಿವರು ಕಿಡಿಕಾರಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ಶೇ.95 ರಷ್ಟು ರೈತರ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ ಆದರೆ,ಯಾದಗಿರಿಯಲ್ಲಿ ಮಾತ್ರ ಶೇ.77 ರಷ್ಟು ಮಾತ್ರ ನಮೂದಿಸಲಾಗಿದೆ 80 ಸಾವಿರ ರೈತರ ಮಾಹಿತಿ ಇನ್ನೂ ಅಪ್ಡೇಟ್ ಆಗಿಲ್ಲ. ಅಧಿಕಾರಿಗಳು ಮಾಡುವ ತಪ್ಪಿಗೆ ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾ?ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು,ಮುಂದಿನ 10 ದಿನದಲ್ಲಿ ಶೇ.100 ರಷ್ಟು ರೈತರ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಬೇಕು”ಎಂದು ಗಡುವು ನೀಡಿದರು.
ಕುಡಿಯುವ ನೀರು ಪೂರೈಸಿ
ಯಾದಗಿರಿ ಭಾಗದಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಈ ವರ್ಷ ಬರಗಾಲ ಎದುರಾಗಿದೆ ಮುಂದಿನ ಬೇಸಿಗೆಯಲ್ಲಿ ಯಾದಗಿರಿ ಭಾಗದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ ಅಧಿಕಾರಿಗಳು ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ನಡೆಸಿ ನೀರಿನ ಸಮಸ್ಯೆ ಕಂಡುಬರುವ ಕಡೆಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಿ ಯಾವ ಭಾಗದಲ್ಲೂ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಿ,ಈ ಖರ್ಚಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಎಸ್ ಡಿ ಆರ್ ಎಫ್ ಹಣವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ತಕರಾರು ಅರ್ಜಿಗಳ ವಿಲೇವಾರಿ:ಮೆಚ್ಚುಗೆ
ಕಳೆದ ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಕರಾರು ಪ್ರಕರಣಗಳ ಇತ್ಯರ್ಥ ವೇಗ ಪಡೆದುಕೊಂಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮೆಚ್ಚುಗೆ ಸೂಚಿಸಿದರು.
ಈ ಬಗ್ಗೆ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಎಸಿ ಕೋರ್ಟ್ ಗಳಲ್ಲಿ ಐದು ವರ್ಷಕ್ಕೆ ಮೇಲ್ಪಟ್ಟ 32,710 ಪ್ರಕರಣಗಳು ಇದ್ದವು.ಆದರೆ,ಕಳೆದ ಮೂರೇ ತಿಂಗಳಲ್ಲಿ 20,519 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಕೋರ್ಟ್ ನಲ್ಲಿರುವ ಪ್ರಕರಣಗಳೂ ಸಹ ತ್ವರಿತ ಗತಿಯಲ್ಲಿ ಇತ್ಯರ್ಥವಾಗುತ್ತಿದೆ.
ತಕರಾರು ಪ್ರಕರಣಗಳ ಕಾರಣಕ್ಕೆ ಸಾರ್ವಜನಿಕರು ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿತ್ತು ಆದರೆ,ಇದೀಗ ಅಧಿಕಾರಿಗಳು ಸೂಚನೆಯಂತೆ ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲೂ ಸಹ ತ್ವರಿತಗತಿಯಲ್ಲಿ ಈ ಪ್ರಕರಣಗಳನ್ನು ಮುಗಿಸಿ ಜನರಿಗೆ ತುಸು ನೆಮ್ಮದಿ ನೀಡಿ ಎಂದರು.
ಕಂದಾಯ ಗ್ರಾಮ ಘೋಷಿಸಿ,ಬಡವರಿಗೆ ನ್ಯಾಯ ಸಲ್ಲಿಸಿ:
ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.
ಸಾರ್ವಜನಿಕರ 30 ವರ್ಷಗಳ ಬೇಡಿಕೆಗೆ ಅನುಗುಣವಾಗಿ 2013ರ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ನಿರ್ಧಾರ ತೆಗದುಕೊಂಡಿದ್ದರು. ಆದರೆ, ಯಾದಗಿರಿಯಲ್ಲಿ ಈ ಸಂಬಂಧ ನಿರೀಕ್ಷಿತ ಕೆಲಸ ಆಗದಿರುವುದು ವಿಷಾಧನೀಯ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 93 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು ಆದರೆ ಈವರೆಗೆ 61 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದರೆ,24 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಬಾಕಿ ಇದೆ.08 ಗ್ರಾಮಗಳನ್ನು ಕೈಬಿಡಲಾಗಿದೆ ಆದರೆ,ಅಂತಿಮ ಅಧಿಸೂಚನೆ ಹೊರಡಿಸದೆ ಫಲಾನುಭವಿಗಳಿಗೆ ಹೇಗೆ ಹಕ್ಕುಪತ್ರ ವಿತರಿಸಿದಿರಿ? ಎಂದು ಪ್ರಶ್ನಿಸಿದ ಸಚಿವರು,ಎಲ್ಲಾ ಅರ್ಹ ಗ್ರಾಮಗಳನ್ನು ಶೀಘ್ರ ಕಂದಾಯ ಗ್ರಾಮಗಳಾಗಿ ಘೋಷಿಸಿ,ಬಡವರ ಪರವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.
ಸರ್ಕಾರಿ ಭೂಮಿ ಗುರುತಿಸಲು ಬೀಟ್ ವ್ಯವಸ್ಥೆ:
ಯಾದಗಿರಿ ಜಿಲ್ಲಾ ಸರಹದ್ದಿನಲ್ಲಿ ಎಷ್ಟು ಸರ್ಕಾರಿ ಜಮೀನು ಎಷ್ಟಿದೆ? ಎಸ್ಸಿ-ಎಸ್ಟಿ ಭೂಮಿ ಎಷ್ಟಿದೆ? ಈ ಪೈಕಿ ಎಷ್ಟು ಒತ್ತುವರಿಯಾಗಿದೆ ಎಂಬ ಕುರಿತು ಅಧಿಕಾರಿಗಳು ಸಂಪೂರ್ಣ ಮಾಹಿತಿ ಕಲೆಹಾಕಬೇಕು,ಈ ಭೂಮಿಯನ್ನು ರಕ್ಷಿಸುವ ಕೆಲಸ ಆಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸರ್ಕಾರಿ ಭೂಮಿಯನ್ನು ಗುರುತಿಸಿದ ನಂತರ ಮೂರು ತಿಂಗಳಿಗೊಮ್ಮೆ ಸರ್ಕಾರಿ ಭೂಮಿಗಳನ್ನು ಬೀಟ್ ವ್ಯವಸ್ಥೆ ಮೂಲಕ ಒತ್ತುವರಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು,ಈ ಮಾಹಿತಿಯನ್ನು ನಮೂದಿಸಲು “ಬೀಟ್” ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು,ಶೀಘ್ರದಲ್ಲಿ ಅಧಿಕಾರಿಗಳ ಬಳಕೆಗೆ ಮುಕ್ತವಾಗಲಿದೆ ಎಂದರು.
ಹೈಕೋರ್ಟ್ ಕೇಸ್ ಗಳ ಬಗ್ಗೆ ಅಸಡ್ಡೆ ಏಕೆ?
ಯಾದಗಿರಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ 187 ಪ್ರಕರಣಗಳಿವೆ ಈ ಪೈಕಿ 114 ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ ಅಲ್ಲದೆ,ನ್ಯಾಯಾಲಯದಲ್ಲಿ ವಕಾಲತ್ತನ್ನೂ ಸಹ ಸಲ್ಲಿಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಿಲ್ಲ ಹೀಗಾಗಿ ನ್ಯಾಯಾಲಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ ಎಂದು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಅಸಮಾಧಾನ ಹೊರಹಾಕಿದ ಸಚಿವರು,
ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕ? ಎಂದು ಕಿಡಿಕಾರಿದರು. ಅಲ್ಲದೆ,ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.
ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ,ಪರಿಶೀಲನೆ:
ಯಾದಗಿರಿ ಪ್ರಗತಿ ಪರಿಶೀಲನಾ ಸಭೆಗೆ ಮುನ್ನವೇ ಸಚಿವ ಕೃಷ್ಣ ಬೈರೇಗೌಡ ಅವರು,ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ಬೆಳಗ್ಗೆಯೇ ಗುರುಮಿಠಕಲ್ ನಾಡ ಕಚೇರಿಗೆ ಭೇಟಿ ನೀಡಿದ ಸಚಿವರು,ಅಲ್ಲಿನ ಕಚೇರಿ ಹೇಗೆ ಕಾರ್ಯನಿರ್ವಹಿಸುತ್ತಿದೆ,ಜನರ ಸಮಸ್ಯೆಗೆ ಅಧಿಕಾರಿಗಳು ಹೇಗೆ ಸ್ಪಂದಿಸುತ್ತಿದ್ದಾರೆ?ಪಹಣಿ ಸೇರಿದಂತೆ ಯಾವೆಲ್ಲಾ ಸೇವೆಯನ್ನು ನಾಡ ಕಚೇರಿಯಲ್ಲಿ ನೀಡಲಾಗುತ್ತಿದೆ ಯಾವೆಲ್ಲಾ ಸೇವೆಯನ್ನು ಆನ್ ಲೈನ್ ಮಾಡಲಾಗಿದೆ ಎಂಬ ಕುರಿತು ಮಾಹಿತಿ ಪಡೆದರು.
ನಂತರ ಯಾದಗಿರಿ ತಾಲೂಕು ಕಚೇರಿಯಲ್ಲಿ ಇ-ಆಫೀಸ್ ಅನುಷ್ಠಾನವಾಗದಿರುವ ಮತ್ತು ರೆಕಾರ್ಡ್ ರೂಂನಲ್ಲಿ 50 ವರ್ಷಗಳ ಹಳೆಯ ದಾಖಲೆಗಳನ್ನು ಸುರಕ್ಷಿತವಾಗಿಡದ ಹಾಗೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸದ ಸಂಬಂಧ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಅಲ್ಲದೆ,ಶೀಘ್ರದಲ್ಲೇ ಎಲ್ಲಾ ದಾಖಲೆಗಳನ್ನೂ ಡಿಜಿಟಲೀಕರಿಸುವಂತೆಯೂ ಸೂಚಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಚಿವರಾದ ಕೃಷ್ಣಬೈರೇಗೌಡ,ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ,ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ,ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ,ಗುರುಮಿಠಕಲ್ ಶಾಸಕ ಶರಣುಗೌಡ ಕಂದಕೂರ,ಕಂದಾಯ ಇಲಾಖೆ ಆಯುಕ್ತ ಪಿ.ಸುನಿಲ್ ಕುಮಾರ,ಭೂ ಮಾಪನ ಇಲಾಖೆ ಆಯುಕ್ತ ಹಾಗೂ ಭೂಮಿ ಮತ್ತು ಯುಪಿಓಆರ್ ನಿರ್ದೇಶಕ ಜೆ ಮಂಜುನಾಥ, ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣಭಾಜಪೈ, ಜಿಲ್ಲಾಧಿಕಾರಿ ಡಾ.ಸುಶೀಲ.ಬಿ,ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ,ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾ ಎಲ್ಲಾ ತಹಶೀಲ್ದಾರರು ಹಾಗೂ ಕಂದಾಯ ಮತ್ತು ವಿವಿಧ ಇಲಾಖೆ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ