ಭದ್ರಾವತಿ:ಶಾಂತಿಪ್ರಿಯ ಶಾಸಕ ಬಿ ಕೆ ಸಂಗಮೇಶ್ವರ್ ರವರ ಅಭಿವೃದ್ಧಿ ಕಾರ್ಯಗಳನ್ನ ಸಹಿಸದೆ, ಕಾಂಗ್ರೇಸ್ ಪಕ್ಷದ ಕಟ್ಟಾಳುಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಿಜೆಪಿ ಜೆಡಿಎಸ್ ಪಕ್ಷದವರು ಗೂಂಡಾ ಪ್ರವೃತ್ತಿಯನ್ನು ಮುಂದುವರೆಸುವ ಮೂಲಕ ಹೀನ ಮನಸ್ಥಿತಿಗೆ ತಲುಪಿದ್ದಾರೆ ಎಂದು ಮಾಜಿ ವಿಧಾನ ಪರಷತ್ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಬಿಜೆಪಿ ಜೆಡಿಎಸ್ ಪಕ್ಷದ ಗೂಂಡಾ ವರ್ತನೆ ಮತ್ತು ದೌರ್ಜನ್ಯದ ವಿರುದ್ದ ಹಾಗೂ ಸಂಸತ್ ಮೇಲಿನ ದಾಳಿ ಹಾಗೂ ಭದ್ರತಾ ವೈಫಲ್ಯ ಖಂಡಿಸಿ ಭದ್ರಾವತಿ ನಗರ ಮತ್ತು ಗ್ರಾಮಾಂತರ ಕಾಂಗ್ರೇಸ್ ಪಕ್ಷದ ವತಿಯಿಂದ ತಾಲ್ಲೂಕು ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ ಭದ್ರಾವತಿಯಲ್ಲಿ ಓಸಿ,ಇಸ್ಪೀಟ್ ಯಾರಿಂದ ಆರಂಭವಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಭದ್ರಾವತಿಯಲ್ಲಿ ರಾಜ್ಯಮಟ್ಟದ ಇಸ್ಪೀಟ್ ಸ್ಪರ್ಧೆ ನಡೆಸಿದ ಕರಾಳ ಇತಿಹಾಸ ಕೂಡಾ ಕ್ಷೇತ್ರದ ಜನರು ಮರೆತಿಲ್ಲ.ಗೂಂಡಾಗಿರಿ,ಇಸ್ಪೀಟನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಬೆಂಬಲಿಸುವುದಿಲ್ಲ. ಅಕ್ರಮ ಚಟುವಟಿಕೆಗಳನ್ನು ತಡೆಯಲು ಕೈಗೊಳ್ಳುವ ಕ್ರಮಕ್ಕೆ ನಮ್ಮ ಬೆಂಬಲವೂ ಇದೆ.
ಭದ್ರಾವತಿಯ ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ಕೊಡಿ,ಇಲ್ಲವಾದರೆ ಸುಮ್ಮನಿರಿ ಗೊಂದಲ ಸೃಷ್ಟಿಸಿ ರಾಜಕಾರಣ ಮಾಡುವುದು ಸರಿಯಲ್ಲ ಅವಳಿ ಕಾರ್ಖಾನೆಗಳ ವಿಚಾರ,ಮಂದಗತಿಯಲ್ಲಿ ಸಾಗುತ್ತಿರುವ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸೇರಿದಂತೆ ಕ್ಷೇತ್ರದ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಗಮನ ಹರಿಸುವುದನ್ನು ಬಿಟ್ಟು ಶಾಸಕರು ಮತ್ತು ಅವರ ಕುಟುಂಬದವರ ವಿರುದ್ದ ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಗೂಂಡಾ ಪ್ರವೃತ್ತಿ ಖಂಡನೀಯ ಎಂದರು.ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಭದ್ರಾವತಿ ಕ್ಷೇತ್ರದ ಅನೇಕ ಸಮಸ್ಯೆಗಳನ್ನು ಪ್ರಶ್ನಿಸುವ ಬದಲು ಕ್ಷುಲ್ಲಕ ಹಲ್ಲೆ ಪ್ರಕರಣವನ್ನು ಪ್ರಸ್ತಾಪಿಸಿ,ಬಿಜೆಪಿ ತನ್ನ ಜವಾಬ್ದಾರಿ ಮರೆತಿರುವುದನ್ನು ಸ್ಪಷ್ಟಪಡಿಸಿದೆ.
ರಾಜ್ಯದ 25 ಜನ ಲೋಕಸಭಾ ಸದಸ್ಯರು ಬಿಜೆಪಿಯವರಿದ್ದು,ಇವರು ಸಂಸತ್ ಸಭೆಯಲ್ಲಿ ವಿ.ಐ.ಎಸ್.ಎಲ್.ವಿಚಾರ ಪ್ರಸ್ತಾಪಿಸಿಲ್ಲ.ಕಾವೇರಿ ವಿಚಾರ ಪ್ರಸ್ತಾಪಿಸಿಲ್ಲ ರಾಜ್ಯದ ಬರದ ವಿಚಾರ ಪ್ರಸ್ತಾಪಿಸಿಲ್ಲ ಪ್ರವಾಹ ಪೀಡಿತರಿಗೆ ಪರಿಹಾರ ನೀಡಿಲ್ಲ ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಆದರೆ ಭದ್ರಾವತಿಗೆ ಆಗಮಿಸಿದಾಗ ವಿ.ಐ.ಎಸ್.ಎಲ್ ಅಭಿವೃದ್ಧಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ ಈ ಬೆಳವಣಿಗೆಯನ್ನು ಗಮನಿಸಿರುವ ಮತದಾರರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಮಾತುಗಳ ಮೂಲಕವೇ ಬೆಂಕಿ ಹಚ್ಚುವ ಈಶ್ವರಪ್ಪ: ಅಧಿಕಾರ ಇಲ್ಲದಿದ್ದರೂ ಪೊಲೀಸ್ ಭದ್ರತೆ ಪಡೆಯುವ ಮೂಲಕ ಪೊಲೀಸ್ ಇಲಾಖೆಯನ್ನು ಕೆ.ಎಸ್.ಈಶ್ವರಪ್ಪ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಮಾತುಗಳ ಮೂಲಕವೆ ಬೆಂಕಿಹಚ್ಚಿ ಅಶಾಂತಿ ಸೃಷ್ಟಿಸುತ್ತಾರೆ ಇಂಥ ಕಾರಣದಿಂದಾಗಿಯೇ ಮೆದುಳು-ನಾಲಗೆಗೂ ಸಂಬಂಧವಿಲ್ಲದ ಮನುಷ್ಯ ಈಶ್ವರಪ್ಪ ಎಂದು ಸಿದ್ದರಾಮಯ್ಯರ ಟೀಕೆ ಸರಿಯಾಗಿದೆ ಎಂದು ದೂರಿದರು.ನಗರಸಭೆ ಅಧ್ಯಕ್ಷೆ ಶ್ರುತಿ ವಸಂತ ಕುಮಾರ್,ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ,ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಸುದೀಪ್ ಕುಮಾರ್,ಮಾಜಿ ನಗರಸಭಾಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ ಕೆ ಮೋಹನ್,ನಗರಸಭೆಯ ಮಾಜಿ ಉಪಾಧ್ಯಕ್ಷ ಚನ್ನಪ್ಪ,ಕೆಪಿಸಿಸಿ ಅಲ್ಪ ಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಸಿ ಎಂ ಖಾದರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಣಿಶೇಖರ್, ಗ್ರಾಮಾಂತರ ಅಧ್ಯಕ್ಷ ಹೆಚ್ ಎಲ್ ಷಡಾಕ್ಷರಿ,ಎನ್ ಎಸ್ ಯು ಐ ಮುಖಂಡ ಮುಸಾವಿರ್ ಪಾಷಾ ಸೇರಿದಂತೆ ಹಲವು ಮುಖಂಡರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ನಗರ ಕಾಂಗ್ರೇಸ್ ಅಧ್ಯಕ್ಷ ಎಸ್ ಕುಮಾರ್,ಪಕ್ಷದ ನಗರಸಭಾ ಸದಸ್ಯರುಗಳಾದ ಲತಾ ಚಂದ್ರಶೇಖರ್,ಮಣಿ,ಜಾರ್ಜ್,ಕಾಂತರಾಜ್ ಹಾಗೂ ಮುಖಂಡರುಗಳಾದ ನಾಗರಾಜ್, ರೇಣುಕಮ್ಮ,ಬಾಲಕೃಷ್ಣ,ಬಿ.ಗಂಗಾಧರ್, ಹೆಚ್.ರವಿಕುಮಾರ್,ಸಿ.ಜಯಪ್ಪ,ಗೋಪಿ,ಪ್ರಾನ್ಸಿಸ್ ಸೇರಿದಂತೆ ವಿವಿಧ ಬ್ಲಾಕ್ ಗಳ ಪ್ರಮುಖರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ