ಹನೂರು:ಚಾಮರಾಜ ನಗರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೇತೃತ್ವದಲ್ಲಿ ಹನೂರು ಪಟ್ಟಣದ ಜಿ ವಿ ಗೌಡ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬರನಿರ್ವಹಣೆ ಮತ್ತು ಪರಿಸ್ಥಿತಿ ಕುರಿತು ಪ್ರಗತಿ ಪರಿಶೀಲನ ಸಭೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ಯೋಜನೆಗಳನ್ನು ಅನುಷ್ಠಾನ ಮಾಡಲು ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಪಶು ಸಂಗೋಪನೆ,ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ರವರು ತಿಳಿಸಿದರು.
ಹನೂರಿನಲ್ಲಿ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಬರ ನಿರ್ವಹಣೆ ಕುರಿತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಯಾವುದೇ ರೀತಿಯ ನೀರಿನ ತೊಂದರೆ ಆಗದಂತೆ ಶಾಶ್ವತ ನೀರಿನ ಸಮಸ್ಯೆ ನಿವಾರಣೆಯಾಗುವ ನಿಟ್ಟಿನಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುಲು ಪಿಡಿಓಗಳು ಕ್ರಮವಹಿಸಿ ಅಂತಹ ಕಡೆ ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ರೈತರಿಗೆ ಮೇವಿನ ಬೀಜಗಳನ್ನು ವಿತರಿಸಿ ಮೇವು ದಾಸ್ತಾನು ಬಗ್ಗೆ ಪರಿಶೀಲಿಸಿ ಮೇವಿನ ಬೀಜ ಕಿಟ್ ಗಳನ್ನು ಬಳಸಿ ಮೇವು ಬೆಳೆಯಲು ಉತ್ತೇಜಿಸಬೇಕು ಹಾಗೂ ಜಾನುವಾರಗಳಿಗೆ ಅಗತ್ಯವಿರುವಷ್ಟು ಮೇವು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ಎಂಆರ್ ಮಂಜುನಾಥ್ ಅವರು ಮಾತನಾಡಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಪಂಪ್ ಮೋಟರ್ ದುರಸ್ತಿ ಕೆಲಸಗಳು ವೇಗವಾಗಿ ಕೈಗೊಂಡು ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕಿದೆ,ಸಮಸ್ಯೆಗಳು ಇದ್ದಲ್ಲಿ ತುರ್ತಾಗಿ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪ ನಾಗ್ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಬಳಸುವ ಟ್ಯಾಂಕ್ ಗಳನ್ನು ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಬೇಕು ಗಡಿ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮೇವು ಸಾಗಾಣಿಕೆಯನ್ನು ತಡೆಗಟ್ಟಬೇಕು ಕೋವಿಡ್ ಮುನ್ಸೂಚನ ಕ್ರಮವಾಗಿ ಹೊರ ರಾಜ್ಯಗಳಿಗೆ ಹೋಗಿ ಬರುವ ಜನರನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಬೇಕು.
20ನೇ ಜಾನುವಾರು ಗಣತಿ ಪ್ರಕಾರ ತಾಲ್ಲೂಕಿನ ಜಾನುವಾರು ಮಾಹಿತಿ ಪಡೆದುಕೊಂಡು ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಹಾಗೂ ರೋಗ ರುಜಿನಗಳು ಬಾರದಂತೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹನೂರು ಶಾಸಕ ಎಂಆರ್ ಮಂಜುನಾಥ್,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್,ಜಿಲ್ಲಾಪಂಚಾಯತ್ ಸಿಇಒ ಆನಂದ್ ಪ್ರಕಾಶ್ ಮೀನಾ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ,ಹನೂರು ತಾಲೂಕು ತಹಸಿಲ್ದಾರ್ ಗುರುಪ್ರಸಾದ್,ಕೊಳ್ಳೇಗಾಲ ತಾಲೂಕು ತಹಸಿಲ್ದಾರ್ ಮಂಜುಳಾ,ಹನೂರು ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್