ಬೆಳಗಾವಿ:ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಮುಂದೆ ಡಿ.4 ರಂದು ಆರಂಭಗೊಂಡ ಕೊಳೆಗೇರಿ ನಿವಾಸಿಗಳ ಅಹೋರಾತ್ರಿ ಧರಣಿ ಸತ್ಯಾಗ್ರಹವು 21 ದಿನ ಪೂರೈಸಿದ್ದು ಧರಣಿ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುತ್ತಿದ್ದಾರೆ.
40ಕ್ಕೂ ಹೆಚ್ಚು ಕುಟುಂಬಗಳು 50 ವರ್ಷಗಳಿಂದ ಕೊಳಗೇರಿಯ ನಿವಾಸಗಳಲ್ಲಿ ವಾಸವಾಗಿದ್ದು, ಜನಪ್ರತಿನಿಧಿಗಳಿಗೆ,ಸಂಬಂಧಪಟ್ಟ ಅಧಿಕಾರಿಗಳಿಗೆ, ಕೊಳಚೆ ನಿರ್ಮೂಲ ಮಂಡಳಿಗೆ,ಹಕ್ಕು ಪತ್ರಕ್ಕಾಗಿ ಹಲವು ಬಾರಿ ಮನವಿ ನೀಡುತ್ತಾ ಬಂದಿದ್ದು, ಮಂಡಳಿಯವರೇನೋ ಭರವಸೆ ನೀಡುತ್ತಾ ಬಂದರು. ಅದನ್ನೇ ನಂಬಿಕೊಂಡು ಇದುವರೆಗೂ ಹಕ್ಕುಪತ್ರಕ್ಕಾಗಿ ಕಾದೆವು ಅವರ ಭರವಸೆಯ ಮಾತುಗಳನ್ನು ಕೇಳಿ ಕೇಳಿ ಬೇಸತ್ತು ಹೋಗಿದ್ದೇವೆ ಅಧಿಕಾರಿಗಳ ಮಾತು ಮಾತಾಗಿ ಉಳಿದಿದೆಯೇ ಹೊರತು ಹಕ್ಕು ಪತ್ರ ಯಾವುದು ಸಿಗಲಿಲ್ಲ.
ನಮ್ಮ ಮನೆಗಳ ಹಕ್ಕುಪತ್ರಗಳನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಳಗಾವಿ ವಿಭಾಗ ಕಚೇರಿಯ ಕಾರ್ಯಪಾಲಕ ಅಭಿಯಂತರ ಬಿ ಎಸ್ ಶಂಭುಲಿಂಗಪ್ಪ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿ.21ರಂದು ಬೆಳಗಾವಿ ಜಿಲ್ಲಾಧಿಕಾರಿಯವರಿಗೆ ಬೈಲಹೊಂಗಲ ಉಪ ವಿಭಾಗಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗಿದೆ.
ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅನಿವಾರ್ಯವಾಗಿ ಮನನೊಂದು ಅಹೋರಾತ್ರಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ,ಹೋರಾಟಕ್ಕೆ ನಿವಾಸಿಗಳಿಗೆ ಜೀವಹಾನಿಯಾದರೆ ಅದಕ್ಕೆ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಬಿ ಎಸ್ ಶಂಭುಲಿಂಗಪ್ಪ ಅವರೇ ಕಾರಣರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಅಂಬೇಡ್ಕರ್ ಯುವ ಸೇನೆ(ರಿ.) ರಾಜ್ಯ ಉಪಾಧ್ಯಕ್ಷ ಹಾಗೂ ಹರಳಯ್ಯ ಕಾಲನಿ (ಮಚಗಾರ ಗಲ್ಲಿ) ನಿವಾಸಿ ಪರಶುರಾಮ ಬಿ ರಾಯಭಾಗ ನೇತೃತ್ವದಲ್ಲಿ ರಾಮು ಕಳಂಕರ,ನಾಗರಾಜ ಆಗಾಸಿ, ರೂಪಾ ದೊಡಮನಿ,ಅಲ್ಲಾಭಕ್ಷ ಪನಿಬಂದ್,ಜಾವಿದ್ ಸಯ್ಯದ್,ಮೈಮುನ್ ಒತ್ತಿಗೇರಿ,ಕಾಶವ್ವ ರಾಯಭಾಗ ಸೇರಿದಂತೆ ಹರಳಯ್ಯ ಕಾಲನಿ ನಿವಾಸಿಗಳು ತಮ್ಮ ಮಕ್ಕಳೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ವರದಿ:ಕೆ ಆರ್ ಶಂಕರ್ ಭದ್ರಾವತಿ