ಭದ್ರಾವತಿ:ಯುವಪೀಳಿಗೆಗೆ ಆದರ್ಶರಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನ ಜ.12ರಂದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಭದ್ರಾವತಿ ಕ್ಷೇತ್ರದ ಶಾಸಕ ಬಿ ಕೆ ಸಂಗಮೇಶ್ವರ್ ತಿಳಿಸಿದರು.
ಭದ್ರಾವತಿ ಬಿ ಹೆಚ್ ರಸ್ತೆಯ ಕಾಂಚನಾ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ವಿದ್ಯಾವಂತ, ನಿರುದ್ಯೋಗಿ ಯುವಕರ ಆರ್ಥಿಕ ಭವಿಷ್ಯವನ್ನು ಭದ್ರವಾಗಿಸಲು ಯುವನಿಧಿ ಯೋಜನೆಯು ಸಹಕಾರಿಯಾಗಿದೆ.2023 ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮೊ ಮುಗಿಸಿರುವ ನಿರುದ್ಯೋಗಿ ಯುವಕರು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು ಹಾಗೂ ಕ್ಷೇತ್ರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜ.12ರಂದು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶಾಸಕ ಬಿ ಕೆ ಸಂಗಮೇಶ್ವರ್ ಕರೆ ನೀಡಿದರು.
ಯುವ ನಿಧಿ ಯೋಜನೆಯ ಭದ್ರಾವತಿ ತಾಲ್ಲೂಕು ಉಸ್ತುವಾರಿ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಶಂಕರಘಟ್ಟ ಮಾತನಾಡಿ ಜ.12 ರಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಶಿವಮೊಗ್ಗ ನಗರದ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿ ನಿರುದ್ಯೋಗಿ ಯುವಕರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಮೂಲಕ ಯುವನಿಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ.ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್,ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಸಂಪುಟ ದರ್ಜೆಯ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ.ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಎಸ್ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಭದ್ರಾವತಿ ಕ್ಷೇತ್ರದ ಶಾಸಕ ಬಿ ಕೆ ಸಂಗಮೇಶ್ವರ,ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ,ಮಾಜಿ ಸಚಿವರುಗಳಾದ ಕಾಗೋಡು ತಿಮ್ಮಪ್ಪ,ಕಿಮ್ಮನೆ ರತ್ನಾಕರ್ ಸೇರಿದಂತೆ ಕಾಂಗ್ರೇಸ್ ಪಕ್ಷದ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಬಲ್ಕೀಷ್ ಬಾನು, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ,ಮಾಜಿ ಉಪಾಧ್ಯಕ್ಷ ಚನ್ನಪ್ಪ,ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್ ಕುಮಾರ್,ಗ್ರಾಮಾಂತರ ಅಧ್ಯಕ್ಷ ಹೆಚ್ ಎಲ್ ಷಡಾಕ್ಷರಿ,ಮಹಿಳಾ ಘಟಕದ ಅಧ್ಯಕ್ಷೆ ಸುಕನ್ಯಾ ರಾಜು, ಮುಖಂಡರುಗಳಾದ ಸಿ ಎಂ ಖಾದರ್,ಎಸ್. ಮಣಿಶೇಖರ್,ಅಂತೋಣಿ ವಿಲ್ಸನ್,ಸಿ.ಜಯ್ಯಪ್ಪ, ಬಿ.ಗಂಗಾಧರ್,ಮುಸಾವೀರ್ ಪಾಷಾ,ಅಫ್ತಾಬ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ