ಯಾದಗಿರಿ:ಹುಣಸಗಿ ತಹಶಿಲ್ದಾರರ ಕಾರ್ಯಾಲಯದಲ್ಲಿ ಜನತಾ ದರ್ಶನ ನಡೆಸಿದ ಜಿಲ್ಲಾಧಿಕಾರಿ ಡಾ:ಬಿ.ಸುಶೀಲಾ
ಜನತಾದರ್ಶನದಲ್ಲಿ ಬಂದಂತಹ ಅಹವಾಲುಗಳಿಗೆ ಸಾಧ್ಯವಾದಷ್ಟು ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಅವರು ಭರವಸೆ ನೀಡಿದರು.
ಹುಣಸಗಿ ತಹಶಿಲ್ದಾರರ ಕಾರ್ಯಾಲಯದ ಆವರಣದಲ್ಲಿ ನಡೆದ ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧೆಡೆಯಿಂದ ಬಂದ ಜನರು ಸಲ್ಲಿಸಿದ ಅಹವಾಲುಗಳನ್ನು ಆಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿ ಅವರು ಮಾತನಾಡಿದರು.
ಜನರ ಸಮಸ್ಯೆಗಳಿಗೆ ನಾನಾ ಇಲಾಖೆಗಳ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಿದ್ದಾರೆ.ಸಮಸ್ಯೆಗಳು ಸರ್ಕಾರದ ನೀತಿಗಳಿಗೆ ಸಂಬಂಧಿಸಿದ್ದರೆ,ಅದನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರೈತರು ಹಾಗೂ ಹಿರಿಯ ನಾಗರಿಕರು ಕೂಡಾ ಲಿಖಿತ ಅಹವಾಲು ಸಲ್ಲಿಸಲು ನೆರವಾಗಲು ಪ್ರತ್ಯೇಕ ಕೇಂದ್ರ ತೆರೆದು,ಅರ್ಜಿಗಳನ್ನು ಬರೆದುಕೊಡುವ ಮೂಲಕ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಸಿಬ್ಬಂದಿ ನೆರವು ನೀಡುತ್ತಾರೆ ಎಂದರು.
ಜನ ಸಲ್ಲಿಸಿದ ಅಹವಾಲುಗಳ ಪ್ರತಿ ಅರ್ಜಿಗೆ ಸ್ವೀಕೃತಿ ನೀಡಿ ಅಹವಾಲು ಬಗೆಹರಿಸಲು ಕೈಗೊಳ್ಳಲಾಗುವ ಕ್ರಮಗಳ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಪಂಚಾಯ್ತಿ ಅಭಿವೃದ್ಧಿ ಇಲಾಖೆ,ಸಮಾಜ ಕಲ್ಯಾಣ ಇಲಾಖೆ,ಜೆಸ್ಕಾಂ ಇಲಾಖೆ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಇನ್ನಿತರ ಇಲಾಖೆಗಳಿಗೆ ಸಂಬಂಧಿಸಿದಂತೆ 100 ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, ಈ ಅರ್ಜಿಗಳ ವಿಲೇವಾರಿಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೊಲ್ ಪಾಟೀಲ,ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ,ತಾಲೂಕ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜಸ್ವಾಮಿ ಹಿರೇಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.