ಭದ್ರಾವತಿ:ಹಿಟ್ ಅಂಡ್ ರನ್ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ದೇಶಾದ್ಯಂತ ಲಾರಿ ಚಾಲಕರು,ಮಾಲೀಕರು ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ನಗರದಲ್ಲೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಬಾರಂದೂರು ಬೈಪಾಸ್ ರಸ್ತೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ತರೀಕೆರೆ ರಸ್ತೆಯ ಗಾಂಧಿವೃತ್ತದ ಮೂಲಕ ಮಾಧವಾಚಾರ್ ವೃತ್ತ, ಹಳೇಸೇತುವೆ,ಬಿ ಹೆಚ್ ರಸ್ತೆ ಮೂಲಕ ಅಂಡರ್ ಬ್ರಿಡ್ಜ್ ಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸುವ ಮೂಲಕ ಕೇಂದ್ರ ಸರ್ಕಾರ ಕೂಡಲೇ ಹೊಸ ಕಾಯ್ದೆಯನ್ನು ಹಿಂಪಡೆಯಬೇಕು.ಹಿಂಪಡೆಯದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.
ಜೈಭುವನೇಶ್ವರಿ ಮಿನಿ ಲಾರಿ ಮಾಲೀಕರ ಮತ್ತು ಚಾಲಕರ ಸಂಘ,ಭದ್ರಾವತಿ ಲಾರಿ ಮಾಲೀಕರು ಮತ್ತು ಚಾಲಕರ ಸಂಘ,ಕುವೆಂಪು ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಸಂಘಗಳ ನೇತೃತ್ವದಲ್ಲಿ ನೂರಾರು ಚಾಲಕರು ಮತ್ತು ಮಾಲೀಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳ ಘೋಷಣೆ ಕೂಗಿದರು.ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ