ತುಮಕೂರು/ಪಾವಗಡ:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲ್ಲೂಕಿನ ವೈ.ಎನ್.ಹೋಸಕೊಟೆಯಲ್ಲಿ ಸಿ.ಐ.ಟಿ.ಯು.ಮಹಿಳಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಆಹಾರ,ಆರೋಗ್ಯ,ಶಿಕ್ಷಣಕ್ಕಾಗಿ ಇರುವ ಯೋಜನೆಗಳನ್ನು ದೀರ್ಘಾವದಿ ಯೋಜನೆಗಳಾಗಿ ಖಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮಹಿಳಾ ಘಟಕದ ಕಾರ್ಯದರ್ಶಿ ಶಿವಗಂಗಮ್ಮ ಭಾರತೀಯ ಕಾರ್ಮಿಕ ಸಮ್ಮೇಳನ(ಐ.ಎಲ್.ಸಿ)ಯ ಶಿಫಾರಸ್ಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಸೇರಿದಂತೆ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು.3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ,ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ರಚಿಸಬೇಕು. ಎನ್.ಇ.ಪಿ ನಿಲ್ಲಿಸಬೇಕು,
ಈ ಯೋಜನೆಗಳಲ್ಲಿ ದುಡಿಯುವ ಗುತ್ತಿಗೆ,ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು ಇವರನ್ನು ಖಾಯಂ ಮಾಡಲು ವಿಶೇಷ ಕಾನೂನು ರಚಿಸಬೇಕು,ಹಲವು ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು ಬಿಸಿಯೂಟ ನೌಕರರಿಗೆ, ಮತ್ತು ಇತರೆ ಸಿಬ್ಬಂದಿಗಳಿಗೆ,31 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು,ನಿವೃತ್ತಿ ಹೊಂದಿದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು.
ವಿದ್ಯುತ್,ರೈಲ್ವೆ ಸೇರಿದಂತೆ ಸಾರ್ವಜನಿಕ ವಲಯಗಳ ಖಾಸಗೀಕರಣ ನಿಲ್ಲಬೇಕು ಇಲ್ಲವಾದಲ್ಲಿ ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಹೋರಾಟ ಕೈಗೊಳ್ಳುವುದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದರು.
ಈ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಯ ಮಹಿಳಾ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ವರದಿ-ಪೃಥ್ವಿರಾಜು ಜಿ.ವಿ