ಕಲಬುರಗಿಯ ಕೋಟನೂರ (ಡಿ) ಪ್ರದೇಶದ ಲುಂಬಿಣಿ ಉದ್ಯಾನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಲಾಗಿದ್ದು ಈ ಕೃತ್ಯವನ್ನು ಖಂಡಿಸಿ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ನಗರದ ಹಲವೆಡೆ ದಲಿತ ಮುಖಂಡರು,ಅಂಬೇಡ್ಕರ್ ಅನುಯಾಯಿಗಳು ಪ್ರತಿಭಟನೆ ನಡೆಸಿದರು.
ಸೋಮವಾರ ರಾತ್ರಿ ಕೃತ್ಯ ನಡೆದಿದ್ದು,ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.ವಿಷಯ ತಿಳಿದು ನಗರದಲ್ಲಿ ಜಮಾಯಿಸಿರುವ ಹಲವಾರು ಸಂಘಟಕರು, ಕಾರ್ಯಕರ್ತರು ನಗರದ ರಾಮ ಮಂದಿರ ವೃತ್ತ, ನಾಗನಹಳ್ಳಿ ರಿಂಗ್ ರೋಡ್,ಲುಂಬಿಣಿ ಉದ್ಯಾನ, ಗಂಜ್ ಪ್ರದೇಶ್ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದರು.
“ಅಂಬೇಡ್ಕರ್‌ಗೆ ಅಪಮಾನ ಮಾಡಿರುವ ಕಿಡಿಗೇಡಿಗಳು ಪಟಾಕಿ ಸಿಡಿಸಿದ್ದಾರೆ.ಘಟನೆ ನಡೆದು ಹಲವಾರು ಗಂಟೆಗಳು ಕಳೆದಿವೆ ಆದರೂ, ಆರೋಪಿಗಳನ್ನು ಬಂಧಿಸಲಾಗಿಲ್ಲ ಕೂಡಲೇ ಆರೋಪಿಗಳನ್ನು ಬಂಧಿಸಬೇಕು”ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಭೇಟಿ ನೀಡಿ,”ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.ಶೀಘ್ರದಲ್ಲೇ ಬಂಧಿಸಿ, ಕ್ರಮ ಕೈಗೊಳ್ಳುತ್ತೇವೆ”ಎಂದು ಭರವಸೆ ನೀಡಿದ್ದಾರೆ.
ಅಲ್ಲದೆ,ಲುಂಬಿಣಿ ಉದ್ಯಾನಕ್ಕೆ ಬಂದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಿ.”ಪ್ರಕರಣದ ತನಿಖೆ ಮುಗಿದ ಬಳಿಕ,ಹೊಸ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ”ಎಂದು ಭರವಸೆ ನೀಡಿದರು.
ವರದಿ:ಅಪ್ಪಾರಾಯ ಬಡಿಗೇರ