ಶಿವಮೊಗ್ಗ:ಕಬ್ಬು ಬೆಳೆಗಾರರಿಗೆ ಭದ್ರಾವತಿಯ ಎಂಪಿಎಂ ಕಾರ್ಖಾನೆಯಿಂದ ಬಾಕಿಯಿರುವ ಹೆಚ್ಚುವರಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಎಂ ಪಿಎಂ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂಬ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸದೆ ಹೋದರೆ ಅತಿ ಶೀಘ್ರದಲ್ಲಿ ಭದ್ರಾವತಿ ತಾಲ್ಲೂಕು ಕಚೇರಿ ಮುಂಭಾಗ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಸಂಚಾಲಕ ಎನ್.ಹೆಚ್ ದೇವಕುಮಾರ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಣ್ಣಯ್ಯ ತಿಳಿಸಿದರು.ಹಳೆನಗರದ ಪತ್ರಿಕಾ ಭವನದಲ್ಲಿ ಆಯೋಜಸಿದ್ದ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರು ಮಾತನಾಡಿ, ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಹೆಗಲಮೇಲೆ ರೈತರ ಚಿಹ್ನೆಯಾದ ಹಸಿರು ಶಾಲು ಹಾಕಿಕೊಂಡು ನಾವು ರೈತರ ಪರ, ರೈತರ ಹಿತ ಕಾಪ್ಪಾಡುತ್ತೇವೆ ಎಂದು ದೊಡ್ಡದಾಗಿ ಭಾಷಣ ಬಿಗಿಯುತ್ತೀರಿ.ಆದರೆ ಅದರ ವಿರುಧ್ದ ನಡೆದುಕೊಳ್ಳುತ್ತಿದ್ದೀರಿ.2ನೇ ಬಾರಿಗೆ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರೇ, ನೀವು ರೈತ ಕುಟುಂಬದಿಂದ ಬಂದವರು ನಿಮಗೆ ರೈತರ ಬಗ್ಗೆ ಕಾಳಜಿ ಇದ್ದರೆ,ಎಂಪಿಎಂ ಕಾರ್ಖಾನೆಯಿಂದ ರೈತರಿಗೆ ಬರಬೇಕಾಗಿರುವ ಹೆಚ್ಚುವರಿ ಹಣ 100 ರೂ. ನಂತೆ ಒಟ್ಟು 4825 ರೈತರಿಗೆ 2 ಕೋಟಿ 94 ಲಕ್ಷ ರೂ. ಹಣವನ್ನು ಕೂಡಲೇ ಮಂಜೂರು ಮಾಡಿಕೊಡಬೇಕು ಮತ್ತು ರೈತರ ಹಿತದೃಷ್ಟಿಯಿಂದ ಎಂಪಿಎಂ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಈರಣ್ಣ,ನಿರ್ದೇಶಕರುಗಳಾದ ಜಯರಾಂ,ನಾಗರಾಜ್ ಮಾವಿನಕೆರೆ,ಶಂಕರ್,ಸುಂದರರಾಜ್ ಮುಂತಾದವರು ಉಪಸ್ಥಿತರಿದ್ದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ