ಚಿಕ್ಕಬಳ್ಳಾಪುರ:ಮಕ್ಕಳಿಗೆ ಹಾಕುವ ಎರಡು ಹನಿ ಪೋಲಿಯೋ ಲಸಿಕೆಯಿಂದ ಪೋಲಿಯೋ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಹೇಳಿದರು.
ಅವರು ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ “ಪೋಲಿಯೋ ಭಾನುವಾರದ ಅಂಗವಾಗಿ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕೆಯನ್ನೂ ಮಕ್ಕಳಿಗೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಮಾತಾಡಿದರು.
ಇಂದಿನಿಂದ ಮಾರ್ಚ್ 6 ರವರೆಗೆ ನಡೆಯಲಿರುವ
ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು,0-5 ವರ್ಷದೊಳಗಿನ 1,22,816 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಪೋಲಿಯೊ ಎಂಬುದು ಅಂಗವಿಕಲತೆ ಉಂಟು ಮಾಡುವ ಸಾಂಕ್ರಾಮಿಕ ರೋಗವಾಗಿದೆ. ಇದು ಪೋಲಿಯೊ ಎಂಬ ವೈರಸ್ ನಿಂದ ಹರಡುವ ರೋಗವಾಗಿದ್ದು, ಪೋಲಿಯೋ ಲಸಿಕೆಯನ್ನು ಹನಿಗಳ ರೂಪದಲ್ಲಿ ಉಚಿತವಾಗಿ 0 ಯಿಂದ 5 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. 647 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು,2,664 ಲಸಿಕಾ ಸಿಬ್ಬಂದಿ ಭಾಗವಹಿಸಲಿದ್ದಾರೆ.5 ವರ್ಷದ ಎಲ್ಲಾ ಮಕ್ಕಳಿಗೂ ತಪ್ಪದೇ ತಮ್ಮಸಮೀಪದ ಲಸಿಕಾ ಕೇಂದ್ರದಲ್ಲಿ ಪೋಲಿಯೊ ಹನಿ ಹಾಕಿಸಬೇಕು.ಮಾರ್ಚ್ 6 ರವರೆಗೆ ನಡೆಯಲಿರುವ ಪೋಲಿಯೊ ಅಭಿಯಾನ ಕಾರ್ಯಕ್ರಮದ ಭಾಗವಾಗಿ ನಗರ ಪ್ರದೇಶಗಳಲ್ಲಿ 4 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3 ದಿನಗಳ ಕಾಲ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪೋಲಿಯೊ ಮುಕ್ತ ಜಿಲ್ಲೆಯನ್ನಾಗಿಸಲು ಮಕ್ಕಳ ಪೋಷಕರು, ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ರಾಷ್ಟ್ರೀಯ ಪಲ್ಸ್ ಪೊಲೀಯೋ ಲಸಿಕಾ ದಿನದ ಅಂಗವಾಗಿ ಜಿಲ್ಲೆಯಾದ್ಯಂತ 3 ದಿನ ನಡೆಯುವ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ತಪ್ಪದೇ ತಮ್ಮ ಮಕ್ಕಳಿಗೆ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆಯನ್ನು ಹಾಕಿಸಬೇಕು. ನವಜಾತ ಶಿಶುವಿನಿಂದ ಐದು ವರ್ಷದೊಳಗಿನ ಪ್ರತಿ ಮಗುವಿಗೂ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಲಸಿಕೆಯನ್ನು ನೀಡಲಾಗುತ್ತದೆ. ಈ ಲಸಿಕೆಯನ್ನು ಹಾಕುವುದರಿಂದ ಪೋಲಿಯೊ ರೋಗಾಣುವನ್ನು ಸಂಪೂರ್ಣವಾಗಿ ನಾಶ ಮಾಡಲು ಸಹಕಾರಿಯಾಗುತ್ತದೆ’ ಎಂದರು.
ಈ ವೇಳೆ “ಶ್ರವಣದ ದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮ” ಕ್ಕೂ ಚಾಲನೆ ನೀಡಿ ಕಿವುಡುತನವನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ಸಲಹೆ ಸೂಚನೆಗಳು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ್ ಕುಮಾರ್,ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳಾ ದೇವಿ, ನಿವಾಸಿ ವೈದ್ಯಾಧಿಕಾರಿ ಡಾಕ್ಟರ್ ರಮೇಶ್,ತಾಲೂಕು ಆರೋಗ್ಯಾಧಿಕಾರಿ ಡಾ ಮಂಜುಳಾ, ವೈದ್ಯರಾದ ಡಾ. ಪ್ರಕಾಶ್,ಡಾ ಚಂದ್ರಶೇಖರ್,ಡಾ.ಉಮಾ,ಡಿಸ್ಟ್ರಿಕ್ಟ್ ನರ್ಸಿಂಗ್ ಆಫೀಸರ್ ಮಿನಾ,ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಜಿ, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿ ವರ್ಗ ಮಕ್ಕಳು ಹಾಗೂ ಪೋಷಕರು ಇದ್ದರು.
ವರದಿ-ತುಳಸಿನಾಯಕ್