ಹನೂರು:ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್ ಸಿ ಮಹದೇವಪ್ಪನವರು ಹನೂರು ಕ್ಷೇತ್ರದ ಜೆಡಿಎಸ್ ಶಾಸಕ ಎಂಆರ್ ಮಂಜುನಾಥ್ ರವರು ಮುಂದಿನ ದಿನಗಳಲ್ಲಿ ನಮ್ಮ ಜೊತೆ ಕೈಜೋಡಿಸುತ್ತಾರೆ ಎಂದು ಹೇಳಿಕೆ ನೀಡಿರುವುದು ನಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ನರೇಂದ್ರ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಮುಖಂಡರ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ
ಜಿಲ್ಲಾ ಕೇಂದ್ರದಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಸ್ ಸಿ ಮಹದೇವಪ್ಪನವರು ಮಾತನಾಡಿ ಜಿಲ್ಲೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ,ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನರೇಂದ್ರರವರು ಅಲ್ಪ ಮತಗಳಿಂದ ಪರಾಭವಗೊಂಡಿದ್ದಾರೆ. ಶಾಸಕರಾಗಿರುವ ಮಂಜುನಾಥ್ ರವರು ಮುಂದಿನ ದಿನಗಳಲ್ಲಿ ನಮ್ಮ ಜೊತೆ ಕೈಜೋಡಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು ಇದು ಹನೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರುಗಳು ಬೇಸರ ವ್ಯಕ್ತಪಡಿಸಿದ್ದರು.ಈ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ಕರೆದು ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಆತ್ಮಸ್ಥೈರ್ಯ ತುಂಬಲಾಗುತ್ತಿದೆ,ಕಳೆದ 50 ವರ್ಷಗಳಿಂದ ದಿ.ರಾಜುಗೌಡರ ಕುಟುಂಬ ಹನೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿಯೂ ಹನೂರು ವಿಧಾನಸಭಾ ಕ್ಷೇತ್ರದಿಂದ ಅತಿಹೆಚ್ಚಿನ ಮತ ಕೊಡಿಸುವಲ್ಲಿ ನರೇಂದ್ರರವರು ಶ್ರಮವಹಿಸಿದ್ದಾರೆ,ಈ ಬಾರಿಯ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಎಲ್ಲರೂ ಶ್ರಮಿಸುತ್ತೇವೆ ಎಂದರು.
ಕಾಂಗ್ರೆಸ್ ನ ಹಿರಿಯ ಮುಖಂಡ ಮಂಗಲ ಪುಟ್ಟರಾಜು ಮಾತನಾಡಿ ನಮ್ಮ ನಾಯಕರಾದ ಆರ್ ನರೇಂದ್ರ ರವರು ಸತತವಾಗಿ ಮೂರು ಚುನಾವಣೆಗಳಲ್ಲಿ ಗೆದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಚುನಾವಣೆಯಲ್ಲಿ ಸೋಲು ಗೆಲುವು ಎಂಬುವುದು ಸಾಮಾನ್ಯ,ಅವರ ನೇತೃತ್ವದಲ್ಲಿ ಪಕ್ಷ ಸದೃಢವಾಗಿದೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯಮಟ್ಟದ ನಾಯಕರು ಜಿಲ್ಲಾ ಮಟ್ಟದ ನಾಯಕರು ಯಾವುದೇ ಸ್ಥಳೀಯ ನಾಯಕರ ಅಭಿಪ್ರಾಯವನ್ನು ಪಡೆಯದೆ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಹದೇವಪ್ಪನವರು ಹಿರಿಯರು ಅವರು ನಮ್ಮ ಪಕ್ಷದ ಮಾಜಿ ಶಾಸಕ ಆರ್ ನರೇಂದ್ರ ರವರಿಗೆ ಮನ್ನಣೆ ನೀಡಬೇಕೆ ಹೊರತು ಬೇರೆ ಪಕ್ಷದಿಂದ ಗೆದ್ದಿರುವ ಶಾಸಕರಿಗೆ ಯಾವುದೇ ಕಾರಣಕ್ಕೂ ಮನ್ನಣೆ ನೀಡಬಾರದು.ತಾವು ಲೋಕೋಪಯೋಗಿ ಸಚಿವರಾಗಿ ಐದು ವರ್ಷ ಉತ್ತಮ ಸೇವೆ ಸಲ್ಲಿಸಿದ್ದೀರಿ ಆದರೆ ತಾವು ಸಹ ಕಳೆದ ಬಾರಿಯ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೀರಿ,ಹೀಗೆಂದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷ ನಿಮ್ಮನ್ನು ಕಡೆಗಣಿಸಿಲ್ಲ ಅದೇ ರೀತಿ ಆರ್ ನರೇಂದ್ರ ಅವರು ಸತತವಾಗಿ ಮೂರು ಬಾರಿ ಶಾಸಕರಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ನಮ್ಮ ನಾಯಕರಿಗೂ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ಮಾತನಾಡಿ ಸಚಿವರಾದ ಮಹದೇವಪ್ಪನವರ ಹೇಳಿಕೆ ಹನೂರು ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ನೋವನ್ನುಂಟು ಮಾಡಿದೆ.ನಿಷ್ಠಾವಂತ ಕಾರ್ಯಕರ್ತರು ಪಕ್ಷ ಬಿಡುವ ಯೋಚನೆಯಲ್ಲಿದ್ದಾರೆ.ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮಂಜುನಾಥ್ ರವರೆ ನಮಗೆ ಪ್ರತಿಸ್ಪರ್ಧೆ ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿ ಅವರ ಜೊತೆ ಹೊಂದಾಣಿಕೆ ರಾಜಕಾರಣ ಮಾಡಲು ನಮ್ಮ ಕಾರ್ಯಕರ್ತರಿಗೆ ಸಾಧ್ಯವಾಗುವುದಿಲ್ಲ,ಇಡೀ ರಾಜ್ಯದಲ್ಲಿ ಪಕ್ಷ ನಿಷ್ಠೆಗೆ ಹೆಸರಾದ ಕುಟುಂಬ ರಾಜುಗೌಡರವರ ಕುಟುಂಬ ಇದನ್ನು ಎಲ್ಲಿ ಬೇಕಾದರೂ ಎದೆತಟ್ಟಿ ಹೇಳುತ್ತೇನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟೇ ಒತ್ತಡ, ಆಮಿಷ ಒಡ್ಡಿದರು ನಮ್ಮ ನಾಯಕರಾದ ಆರ್ ನರೇಂದ್ರ ಅವರು ಪಕ್ಷನಿಷ್ಠೆ ತೋರಿಸಿದರು ಮುಂದಿನ ದಿನಗಳಲ್ಲಿ ನಮ್ಮ ನಾಯಕರ ಅಭಿಪ್ರಾಯ ಪಡೆದೆ ಮುಂದಿನ ಕ್ರಮ ಕೈಗೊಳ್ಳಬೇಕು ನಾವು ಅವರ ಹಿಂಬಾಲಕರಾಗಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಾಮುಲ್ ನಿರ್ದೇಶಕರುಗಳಾದ ನಂಜುಂಡಸ್ವಾಮಿ,ಶಾಹುಲ್ ಅಹಮದ್,ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್,ಮಾಜಿ ಉಪಾಧ್ಯಕ್ಷರುಗಳಾದ ಬಸವರಾಜು,ಮಾದೇಶ್ ಕಾಂಗ್ರೆಸ್ ಮುಖಂಡರುಗಳಾದ ವಿಷ್ಣುಕುಮಾರ್, ಮಾದೇಶ್,ನಾಗಣ್ಣ,ರಾಜು,ನಟರಾಜು ಪೆದ್ದನ ಪಾಳ್ಯ ಮಣಿ,ಯುವ ಮುಖಂಡ ಮಂಜೇಶ್,ರಾಜೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್