ಈ ಜಗತ್ತಿಗೆ ಮೂರು ಅತ್ಯಮೂಲ್ಯವಾದ ರತ್ನಗಳ ಕೊಡುಗೆಯಾಗಿ ನಮ್ಮ ಭಾರತ ನೀಡಿದೆ.ಅವುಗಳಲ್ಲಿ ಮೊದಲನೇ ರತ್ನವೇ ತಥಾಗತ ಗೌತಮ ಬುದ್ಧರು. ಎರಡನೇ ರತ್ನವೇ ಅಣ್ಣ ಬಸವಣ್ಣನವರು.ಮೂರನೇ ರತ್ನವೇ ಡಾ.ಬಿ ಆರ್ ಬಾಬಾಸಾಹೇಬ್ ಅಂಬೇಡ್ಕರ.
ಈ ಮೂವರು ಮಹಾಪುರುಷರ ತತ್ವ ಸಂದೇಶಗಳ ರಸವನ್ನು ಹೀರಿದ ಮನುಷ್ಯನಲ್ಲಿ ಹೊಸ ಚೈತನ್ಯ ಮೂಡುತ್ತದೆ.ಆತನು ಭ್ರಮಾ ಲೋಕದಿಂದ ಹೊರಬಂದು ಸ್ವತಂತ್ರನಾಗುತ್ತಾನೆ ಹಾಗಾಗಿಯೇ ಇಂದು ಗೌತಮ ಬುದ್ಧರಿಗೆ ವಿಶ್ವದ ಬೆಳಕು ಎಂದು ಕರೆಯಲಾಗುತ್ತಿದೆ.ಅಣ್ಣ ಬಸವಣ್ಣನವರು ವಿಶ್ವಗುರುವಿನ ಹೆಸರಿಗೆ ಪಾತ್ರರಾಗಿದ್ದಾರೆ.ಡಾ.ಬಿ ಆರ್ ಬಾಬಾಸಾಹೇಬ್ ಅಂಬೇಡ್ಕರ್ ಅವರು ವಿಶ್ವ ಜ್ಞಾನಿಯಾಗಿ ಕಂಗೊಳಿಸುತ್ತಿದ್ದಾರೆ.
ವಿಶ್ವಜ್ಞಾನಿ ಡಾ.ಬಿ ಆರ್ ಬಾಬಾಸಾಹೇಬ ಅಂಬೇಡ್ಕರ ಅವರು ಈ ದೇಶದಲ್ಲಿ ಹುಟ್ಟದೆ ಹೋಗಿದ್ದಾರೆ ಈ ದೇಶದ ದೀನ ಬಡವರ ಬದುಕು ಅತ್ಯಂತ ಹೀನಾಯ ಸ್ಥಿತಿಯಲ್ಲಿರುತ್ತಿತ್ತು.ಶತಮಾನಗಳ ಹಿಂದೆ ನರಿ ಬುದ್ಧಿಯ ಮನು ಮುನಿ ಮುಠ್ಠಾಳನು ಹೆಣೆದಿರುವ ಅಸಮಾನತೆ,ಮೇಲು-ಕೀಳುಯೆಂಬ ತಾರತಮ್ಯ ಭರಿತ ನೀತಿ ನಿಯಮಗಳು ಹಾಗೆಯೇ ಮುಂದುವರಿಯುತ್ತಿದವು.ಅಸ್ಪೃಶ್ಯತೆಯ ಕರಾಳ ಆಚರಣೆ ಇನ್ನು ಹೆಚ್ಚಾಗುತ್ತಿತ್ತು.ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ತಮ್ಮ ಬರಹಗಳಲ್ಲಿ ದಾಖಲಿಸಿರುವಂತೆ ಈ ದೇಶದ ದುರಾದೃಷ್ಟಗಳಿಗೆ ಈ ಮನುಮುನಿಯೇ ನೇರ ಕಾರಣ.
ಈ ಮನುವಿನ ಆಧಾರ ಮೇಲೆ ಮನುವಿನ ಸಂತತಿಗಳು ಧರ್ಮ ಎನ್ನುವ ಹೆಸರಿನಲ್ಲಿ ದೇವರು ದೆವ್ವ ಸ್ವರ್ಗ-ನರಕಗಳ ಕಥೆಯನ್ನು ಕಟ್ಟಿ ಮುಗ್ಧ ಜನರನ್ನು ಹೆದರಿಸುವಂತ ಧರ್ಮ ಗ್ರಂಥಗಳು ಜಾರಿಗೆ ತಂದರು. ಋಗ್ವೇದ ಹತ್ತನೇ ಅಧ್ಯಾಯ ಪುರುಷಸೂಕ್ತದ ಕಾನೂನಿನ ಮೂಲಕ ಜಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದರು,ಇದರಿಂದಾಗಿ ಸುಮಾರು 6500 ಕ್ಕಿಂತಲೂ ಅಧಿಕ ಜಾತಿಗಳಾಗಿ ಈ ದೇಶದ ಬಹುಜನರು ಒಡೆದು ಹೋದರು.ಮನುಷ್ಯ ಮನುಷ್ಯರ ಮಧ್ಯೆ ಬಹುದೊಡ್ಡ ಕಂದಕವನ್ನೇ ಸೃಷ್ಟಿಯಾಯಿತು.ಬಡವರ ಮೇಲೆ ಅನ್ಯಾಯ,ಅತ್ಯಾಚಾರ,ದಬ್ಬಾಳಿಕೆಗಳು ನಡೆದರು ಮನುವಿನ ಈ ಅಸಮಾನತೆ ಬರಿತ ನಿಯಮಗಳಿಂದಾಗಿ ಯಾರು ಪ್ರಶ್ನೆ ಮಾಡುವಂತಿರಲಿಲ್ಲ.ಒಂದು ವೇಳೆ ಪ್ರಶ್ನೆ ಮಾಡಿದ್ದಾರೆ ಅಂತ ಶಿಕ್ಷೆಗೆ ಗುರಿಯಾಗುತ್ತಿದೆ.ಈ ಅನ್ಯಾಯ,ಅತ್ಯಾಚಾರ,ಶೋಷಣೆ,ದಬ್ಬಾಳಿಕೆಗಳು ಸುಮಾರು ಎರಡು ಸಾವಿರಕ್ಕಿಂತ ಅಧಿಕ ವರ್ಷಗಳ ಕಾಲ ಈ ದೇಶದ ಬಡವರ ಮೇಲೆ ನಿರಾತಂಕವಾಗಿ ನಡೆಯುತ್ತಲೇ ಬಂದವು.
ಇಂತಹ ಶೋಷಣೆಯನ್ನು ತಡೆಯಲು ಈ ದೇಶದಲ್ಲಿ ಇದ ಮೂವತ್ತಾರು ಕೋಟಿ ದೇವರುಗಳಲ್ಲಿ ಯಾವುದೇ ದೇವರು ಮುಂದೆ ಬರಲಿಲ್ಲ.ನಾನೆ ದೇವ ಮಾನವ ಎಂದು ಹೇಳಿಕೊಂಡು ತಿರುಗಾಡುವ ಡೋಂಗಿ ಬಾಬಾಗಳಗಾಲ್ಲಿ ಮುಂದೆ ಬರಲಿಲ್ಲ.ಬದಲಾಗಿ ಇವರ ಹೆಸರುಗಳ ಮೇಲೆ ಅನ್ಯಾಯಗಳು ಮತ್ತಷ್ಟು ಹೆಚ್ಚಾಗುತ್ತಲೇ ಹೋದವು.ನಾನು ದಲಿತೋದರಕ, ಬಡವರ ಬಂಧು ಎಂದು ಕರೆದುಕೊಳ್ಳುತ ಬಡವರ ಹೆಸರಿನಲ್ಲಿ ಚಂದಾ ವಸೂಲಿ ಮಾಡಿ ಕುಡಿದು-ತಿಂದು ಮಜಾ ಮಾಡುತ್ತಾ ದೇಶ ಸುತ್ತುತ್ತಿದ ಖಾದಿ ತೊಟ್ಟ ಬೆತ್ತಲೆ ನಕಲಿ ನಾಯಕರಿಂದಲು ಈ ದೇಶದ ಬಡವರ ಉದ್ಧಾರ ಆಗಲಿಲ್ಲ.ಈ ದೇಶದ ಬಡವರ ಉದ್ಧಾರ ಆಗಿರುವುದು ಕೇವಲ ಬಾಬಾಸಾಹೇಬರ ನಿರಂತರವಾದ ಹೋರಾಟದಿಂದ ಅವರ ಪರಿಶ್ರಮದಿಂದ,ಅವರ ಜ್ಞಾನದಿಂದ,ಅವರ ತ್ಯಾಗದಿಂದಲೇ ಸಾಧ್ಯವಾಗಿದೆ ಹೊರತು;ಯಾವುದೇ ದೇವರಿಂದಾಗಲಿ ದಿಂಡಾರುಗಳಿಂದಾಗಲಿ ಸಾಧ್ಯವಾಗಲಿಲ್ಲ ಹಾಗಾಗಿಯೇ ಇಂದು ವಿಶ್ವಜ್ಞಾನಿ ಡಾ. ಬಿ ಆರ್ ಬಾಬಾಸಾಹೇಬ ಅಂಬೇಡ್ಕರ ಅವರು ಮುಕ್ಕೋಟಿ ದೇವರಿಗಿಂತ ಸರ್ವ ಶ್ರೇಷ್ಠರಾಗಿದ್ದಾರೆ.
ಒಂದು ವೇಳೆ ಡಾ.ಬಿ ಆರ್ ಬಾಬಾಸಾಹೇಬ ಅಂಬೇಡ್ಕರ ಅವರು ಇಲ್ಲದ್ದಿದ್ದರೆ ಈ ದೇಶದ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ನೆನೆಸಿಕೊಂಡರೆ ಮೈಯಲ್ಲಿ ಒಂದು ರೀತಿಯ ನಡುಕ ಹುಟ್ಟುತ್ತದೆ.
ನಮ್ಮ ದೇಶ ಸ್ವತಂತ್ರವಾದ ಮೇಲೆ ಅಧಿಕಾರವು ನೇರವಾಗಿ ಉಳ್ಳವರಾದ ಮನುವಿನ ಸಂತತಿಗಳ ಕೈಗೆ ಹೋಗಿ ಮೊದಲಿನಂತೆ ಮನುಸ್ಮೃತಿ ಜಾರಿಗೊಳಿಸುತ್ತಿದರು ಅಥವಾ ಮನುಸ್ಮೃತಿಯ ಆಧಾರದ ಮೇಲೆ ಧರ್ಮ ಗ್ರಂಥಗಳ ಉಲ್ಲೇಖಗಳ ಆಧಾರದ ಮೇಲೆ ಹೊಸ ಸಂವಿಧಾನವನ್ನು ರಚಿಸಿಲಾಗುತಿತ್ತು.ಕ್ರಿ.ಶ 1835ರಲಿ ಬ್ರಿಟಿಷರು ಜಾರಿಗೊಳಿಸಿದ ಸಾರ್ವತ್ರಿಕ ಶಿಕ್ಷಣ ನೀತಿಯನ್ನು ಮನುಸ್ಮೃತಿಯ (ಅಧ್ಯಾಯ-4:80) ಪ್ರಕಾರ ರದ್ದುಗೊಳಿಸಿ.ಈ ದೇಶದ ಬಹುಸಂಖ್ಯಾತರಾದ ಶೂದ್ರ ಅಸ್ಪೃಶ್ಯರಿಗೆ ವಿದ್ಯೆಯನ್ನು ನೀಡದೆ ದೂರ ಇಡುತ್ತಿದ್ದರು.ಇದರಿಂದಾಗಿ ಈ ದೇಶದ ಯಾವೊಬ್ಬ ಶೂದ್ರ ಅಸ್ಪೃಶ್ಯರು ವಿದ್ಯವಂತರಾಗುತ್ತಿರಲಿಲ್ಲ.ಒಂದು ವೇಳೆ ಶೂದ್ರ ಅಸ್ಪೃಶ್ಯರು ಏನಾದರೂ ವಿದ್ಯೆಯನ್ನು ಕಲಿತರೆ ಹಂತವರನ್ನು ಮನುಸ್ಮೃತಿಯ (ಅಧ್ಯಾಯ- 8:272) ಪ್ರಕಾರ ಶಿಕ್ಷೆ ವಿಧಿಸಲಾಗುತ್ತಿತ್ತು.ವಿದ್ಯೆ ಕಲಿತವರ ಕೈ ಕತ್ತರಿಸುತ್ತಿದ್ದರು.ವಿದ್ಯೆ ಉಚ್ಚಾರಣೆ ಮಾಡಿದರೆ ಅವರ ನಾಲಿಗೆ ಕತ್ತರಿಸಿ ಮೂಕರನ್ನಾಗಿ ಮಾಡುತ್ತಿದ್ದರು.ವಿದ್ಯೆಯನ್ನು ಕೇಳಿದರೆ ಕಿವಿಯಲ್ಲಿ ಕಾದ ಕಬ್ಬಿಣದ ಸೀಸವನ್ನು ಸುರಿದು ಅವರ ಕಿವಿಯನ್ನು ಕಿವುಡು ಮಾಡುತ್ತಿದ್ದರು.
ಇಂತಹ ಅಸಮಾನತೆಗೆ ತದ್-ವಿರುದ್ಧವಾಗಿ ಡಾ.ಬಿ ಆರ್ ಬಾಬಾಸಾಹೇಬ ಅಂಬೇಡ್ಕರ ಅವರು ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎನ್ನುವ ಗೌತಮ ಬುದ್ಧರ ತತ್ವದ ಆಧಾರದ ಮೇಲೆ ಈ ದೇಶದ ಸಂವಿಧಾನವನ್ನು ರಚಿಸಿ ಕೊಟ್ಟರು. ‘ಸಂವಿಧಾನದ 14ನೇ ವಿಧಿಯ ಪ್ರಕಾರ ಕಾನೂನು ಮುಂದೆ ಎಲ್ಲರು ಸಮಾನರು.’ಎಂದು ಘೋಷಿಸಿ ಮಾನವಿಯ ಮೌಲ್ಯಗಳು ಎತ್ತಿ ಹಿಡಿದರು. ಸಂವಿಧಾನದ 21(ಎ) ವಿಧಿಯ ಪ್ರಕಾರ ಸರ್ವರಿಗೂ ಶಿಕ್ಷಣದ ಹಕ್ಕನ್ನು ನೀಡಿದರು.
ಬಾಬಾಸಾಹೇಬರು ಅಂದು ಮತದಾನ ಹಕ್ಕಿನ ಬಗ್ಗೆ ಹೋರಾಟ ಮಾಡದೆ ಹೋಗಿದ್ದರೆ ಇಂದು ದಲಿತರಿಗೆ ಮತ್ತು ಮಹಿಳೆಯರಿಗೆ ಮತದಾನ ಮಾಡುವ ಹಕ್ಕುನ್ನು ಸಂಪೂರ್ಣವಾಗಿ ನಿರಾಕರಿಸಲಾಗುತ್ತಿತು ಹಾಗಾಗಿ ಇಡೀ ದೇಶದಲ್ಲೇ ಒಬ್ಬನೇ ಒಬ್ಬ ದಲಿತ ವ್ಯಕ್ತಿಯಾಗಲಿ ಅಥವಾ ಮಹಿಳೆಯಾಗಲಿ ಇದು ಗ್ರಾಮ ಪಂಚಾಯಿತಿ ಸದಸ್ಯರು ಸಹ ಆಗುತ್ತಿರಲಿಲ್ಲ ತಾಲೂಕ ಪಂಚಾಯತಿ ಅಥವಾ ಜಿಲ್ಲಾ ಪಂಚಾಯತ ಸದಸ್ಯರಾಗುತ್ತಿರಲಿಲ್ಲ. ವಿಧಾನಸಭಾ ಸದಸ್ಯ(M.L.A) ಅಥವಾ ಲೊಕಸಭಾ ಸದಸ್ಯ(M.P) ವಾಗಲು ಸಾಧ್ಯವಾಗುತ್ತಿರಲಿಲ್ಲ. ಭಾರತದ ರಾಜಕೀಯದಲ್ಲಿ ಒಬ್ಬನೇ ಒಬ್ಬ ದಲಿತ ವ್ಯಕ್ತಿಗೆ ಹಾಗೂ ಮಹಿಳೆಯರಿಗೆ ಪ್ರವೇಶ ಸಿಗುತ್ತಿರಲಿಲ್ಲ. ಇಡೀ ದೇಶದಲ್ಲೇ ಒಬ್ಬನೇ ಒಬ್ಬ ಶೂದ್ರನಾಗಲಿ, ಅಸ್ಪೃಶ್ಯನಾಗಲಿ ಯಾವುದೇ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ.
ಶೂದ್ರರಾಗಲಿ ಅಥವಾ ಅಸ್ಪೃಶ್ಯರಾಗಲಿ ಧನಾರ್ಜನೆ ಮಾಡುವ ಸಾಮರ್ಥ್ಯವಿದ್ದರೂ ಮನುಸ್ಮೃತಿಯ (ಅಧ್ಯಾಯ-10:129 ಮತ್ತು 8:417) ಪ್ರಕಾರ ಹಣ ಸಂಪಾದನೆ ಮಾಡುವಂತಿರಲಿಲ್ಲ.ಒಂದು ವೇಳೆ ಶೂದ್ರ ಅಸ್ಪೃಶ್ಯ ಜಾತಿಯವರು ಹಣದ ಆಸೆಯಿಂದ ಮೇಲ್ಜಾತಿಯವರ ವೃತ್ತಿಯನ್ನು ಮಾಡಿದರೆ, ಮನುಸ್ಮೃತಿಯ (ಅಧ್ಯಾಯ-10:96) ಪ್ರಕಾರ ಅವರ ಎಲ್ಲ ಆಸ್ತಿಯನ್ನು ಕಸಿದುಕೊಂಡು ಬಹಿಷ್ಕಾರ ಹಾಕಿ ಗಡಿಪಾರು ಮಾಡಲಾಗುತ್ತಿತ್ತು.ಹಾಗಾಗಿ ಇಂದು ಈ ದೇಶದಲ್ಲಿ ಯಾವುದೇ ಶೂದ್ರ ಅಸ್ಪೃಶ್ಯರು ಭೂಮಿ ಹೊಂದುವ ಹಾಗೆ ಇರುತ್ತಿರಲಿಲ್ಲ.ಇದರಿಂದಾಗಿ ಭಾರತದ ಎಲ್ಲಾ ದಲಿತರು ಇಂದು ಭೂರಹಿತರಾಗಿರುತ್ತಿದ್ದರು.ಸತ್ತಾಗ ಶವ ಸಂಸ್ಕಾರ ಮಾಡಲು ಸಹ ಜಾಗ ಸಿಗುತ್ತಿರಲಿಲ್ಲ.ಇಂತಹ ಅನ್ಯಾಯವನ್ನು ಹೋಗಲಾಡಿಸಲು ಬಾಬಾಸಾಹೇಬರು ಭಾರತೀಯ ಸಂವಿಧಾನದ 15ನೇ ವಿಧಿಯಲ್ಲಿ ‘ಧರ್ಮ,ಜಾತಿ,ಲಿಂಗ,ಭಾಷೆ,ಜನ್ಮಸ್ಥಳ ಇವುಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.’ಎಂದು ನಿಷೇಧ ಹೇರಿದರು. ಸಂವಿಧಾನದ 16ನೇ ವಿಧಿಯಲ್ಲಿ ‘ಸಾರ್ವಜನಿಕ ಹುದ್ದೆಗಳನ್ನು ಹೊಂದಲು ಮತ್ತು ಸಂವಿಧಾನದ 19ನೇ ವಿಧಿಯ ಪ್ರಕಾರ ಸ್ವಾತಂತ್ರ್ಯದ ಹಕ್ಕುನ್ನು ನೀಡಿದರು.
ಬಾಬಾಸಾಹೇಬರು ಹೋರಾಟ ಮಾಡದೆ ಹೋಗಿದ್ದರೆ, ಮನುಸ್ಮೃತಿ (ಅಧ್ಯಾಯ–10: 51) ಪ್ರಕಾರ ಅಸ್ಪೃಶ್ಯರು ಊರ ಹೊರಗೆಯೇ ವಾಸಿಸಬೇಕಾಗುತ್ತಿತ್ತು.ನಾಯಿ,ಕತ್ತೆಗಳೆ ಅವರ ಸೊತ್ತು,ಹೆಣದ ಬಟ್ಟೆಯೇ ಅವರ ಉಡುಗೆ ತೊಡುಗೆ, ಒಡೆದ ಮಣ್ಣಿನ ಪಾತ್ರೆಗಳಲ್ಲಿಯೇ ಅವರ ಊಟ ಉಪಚಾರ.ಮನುಸ್ಮೃತಿ (ಅಧ್ಯಾಯ–10: 55) ಪ್ರಕಾರ ಅಸ್ಪೃಶ್ಯರಿಗೆ ಊರ ಒಳಗೆ ಪ್ರವೇಶವಿರುತ್ತಿರಲಿಲ್ಲ.ಸಂತೆ,ಬಜಾರ್,ಜಾತ್ರೆ,ಹೊಟೆಲ್,ಸಿನಿಮಾ ಮಂದಿರ,ಶಾಲೆ,ಮಂದಿರ,ರೈಲು ನಿಲ್ದಾಣ,ಬಸ್ ನಿಲ್ದಾಣ,ಹಡಗು ನಿಲ್ದಾಣ,ವಿಮಾನ ನಿಲ್ದಾಣ,ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಅಸ್ಪೃಶ್ಯರ ಪ್ರವೇಶ ನಿಷೇಧಿಸಲಾಗುತ್ತಿತ್ತು.ಅದೇ ರೀತಿಯಾಗಿ ಅಸ್ಪೃಶ್ಯರರು ಕಾರುಗಳಲ್ಲಿ,ಬಸ್ಸುಗಳಲ್ಲಿ, ರೈಲುಗಳಲ್ಲಿ,ವಿಮಾನಗಳಲ್ಲಿ,ಹಡಗುಗಳಲ್ಲಿ ಪ್ರಯಾಣಿಸದಂತೆ ನಿಷೇಧವನ್ನು ಹೇರಲಾಗುತ್ತಿತ್ತು. ಇಂದು ಯಾವೊಬ್ಬ ಶೂದ್ರ ಅಸ್ಪೃಶ್ಯರು ಸ್ವಂತ ವಾಹನಗಳು ಹೊಂದುತ್ತಿರಲಿಲ್ಲ.ಮನುಸ್ಮೃತಿ (ಅಧ್ಯಾಯ-10:52) ಪ್ರಕಾರ ಯಾವುದೇ ಅಸ್ಪೃಶ್ಯ ಹೆಂಗಸರು ಚಿನ್ನ,ಬೆಳ್ಳಿಯ ಆಭರಣಗಳು ಧರಿಸುವಂತಿರಲಿಲ್ಲ.ಅಸ್ಪೃಶ್ಯರು ಉತ್ತಮವಾದ ಮನೆಗಳನ್ನು ಕಟ್ಟಿಕೊಂಡು ವಾಸಮಾಡಲು ಸಾಧ್ಯವಾಗುತ್ತಿರಲಿಲ್ಲ.
ಒಟ್ಟಿನಲ್ಲಿ ವಿಶ್ವಜ್ಞಾನಿ ಡಾ.ಬಿ ಆರ್ ಬಾಬಾಸಾಹೇಬ ಅಂಬೇಡ್ಕರ ಅವರು ಇಲ್ಲದೆ ಹೋದರೆ,ಇಂದು ಭಾರತದ ದಲಿತರು ಭೂಮಿ ಇಲ್ಲದೆ,ಮನೆ ಇಲ್ಲದೆ, ವಿದ್ಯೆ ಇಲ್ಲದೆ,ಅಧಿಕಾರ-ಅಂತಸ್ತುಗಳಿಲ್ಲದೆ.ಎಲ್ಲಾ ರೀತಿಯ ನಾಗರಿಕ ಹಕ್ಕುಗಳಿಂದ ವಂಚಿತರಾಗಿ ತಿನ್ನಲು ಅನ್ನವಿಲ್ಲದೆ ಗುಲಾಮರಂತೆ ನಿರಂತರ ಅಲೆಮಾರಿಗಳಾಗಿ ಪ್ರಾಣಿಗಳಿಗಿಂತಲೂ ಹೀನಾಯವಾಗಿ ಬದುಕಬೇಕಾಗುತ್ತಿತ್ತು.ಇಂತಹ ಎಲ್ಲಾ ಕಂಟಕಗಳಿಂದ ಸಂಘರ್ಷದ ಮೂಲಕ ಈ ದೇಶದ ಬಡವರಿಗೆ ಮುಕ್ತಿ ನೀಡಿದು ವಿಶ್ವಜ್ಞಾನಿ ಡಾ.ಬಿ ಆರ್ ಬಾಬಾಸಾಹೇಬ ಅಂಬೇಡ್ಕರ್ ಅವರು.
✍️ಅಶ್ವಜೀತ ದಂಡಿನ
ಯುವ ಬರಹಗಾರರು,ಬೀದರ