ಭದ್ರಾವತಿ:ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ರೂಪಿಸಬೇಕೆಂಬ ಮಹತ್ವಕಾಂಕ್ಷಿಯೊಂದಿಗೆ ನಾಗರಿಕರ ಒತ್ತಸೆಯಂತೆ ಈ ಬಾರಿಯ ಲೋಕಸಭಾ ಚುನಾವಣೆ 2024 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ 2018 ಮತ್ತು 2023ರ ಭದ್ರಾವತಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಜಾನ್ ಬೆನ್ನಿ ತಿಳಿಸಿದರು.
ಹಳೆ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಭದ್ರಾವತಿ ಕ್ಷೇತ್ರದ ಎರಡು ಕಣ್ಣುಗಳಂತಿದ್ದ ಅವಳಿ ಕಾರ್ಖಾನೆಗಳ ಆರಂಭವಾಗದ ಹೊರತು ಭದ್ರಾವತಿ ಸೇರಿದಂತೆ ಜಿಲ್ಲೆಯ ಪೂರ್ಣ ಪ್ರಮಾಣದ ಅಭಿವೃದ್ಧಿ ಅಸಾಧ್ಯ ಎಂಬುದು ಮನವರಿಕೆಯಾಗಿದೆ.
ರಾಜಕೀಯ ಪಕ್ಷಗಳ ಬಗ್ಗೆ ಮತದಾರ ಈಗಾಗಲೇ ವಿಶ್ವಾಸ ಕಳೆದುಕೊಂಡಿರುವ ಕಾರಣ ಕೈಗಾರಿಕೆ ಶಿಕ್ಷಣ ಆರೋಗ್ಯ ಕೃಷಿ ಸೇರಿದಂತೆ ಎಲ್ಲಾ ರಂಗಗಳಲ್ಲಿ ಜಿಲ್ಲೆಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನನ್ನ ಗುರಿಯಾಗಿದೆ.
ಶತಮಾನ ಪೂರೈಸಿರುವ ವಿ ಐ ಎಸ್ ಎಲ್ ಪರಿಸ್ಥಿತಿ ಸಹ ಶೋಚನೀಯವಾಗಿದ್ದು ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿಯೇ ಬಂಡವಾಳ ತೊಡಗಿಸಿ ಪುನರುಜ್ಜೀವನಗೊಳಿಸಬೇಕೆಂಬುದು ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಯ ಒತ್ತಾಸೆಯಾಗಿದೆ. ಆದ್ದರಿಂದ ಮತದಾರ ಬಂಧುಗಳು ಬೆಂಬಲಿಸಿ ಆಶೀರ್ವದಿಸುವ ಮೂಲಕ ಆರಿಸಿ ಕಳುಹಿಸುವಂತೆ ಜಾನ್ ಬೆನ್ನಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕುಮಾರ,ಚಂದ್ರು,ನಾಗರಾಜ್,ಜ್ಯೋತಿ ಮನೋಹರ್ ಮುಂತಾದವರು ಉಪಸ್ಥಿತರಿದ್ದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ