ಸೊರಬ: ಹಬ್ಬಗಳ ಆಚರಣೆಯಿಂದ ಕುಟುಂಬ ಮತ್ತು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಯಬೇಕು. ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಸರ್ವರು ಸಹಕಾರ ನೀಡಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ರಮೇಶ್ ಹೇಳಿದರು.
ಇಂದು ಸಂಜೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿಸಭೆಯನ್ನುದ್ದೇಶಿಸಿ ಅವರು ಮಾತನಾಡಿ ಭಾರತಾಂಬೆಯ ಪುಣ್ಯ ಕ್ಷೇತ್ರದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದು,ಇಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಬದುಕಬೇಕು. ಬೈಕ್ ವ್ಹೀಲಿಂಗ್,ತ್ರಿಬಲ್ ರೈಡಿಂಗ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ಕಾನೂನು ಮೀರಿ ವರ್ತಿಸುವವರ ವಿರುದ್ಧ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ಸಬ್ ಇನ್ಸ್ಪೆಕ್ಟರ್ ನಾಗರಾಜ್ ಮಾತನಾಡಿ,ಧಾರ್ಮಿಕ ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಣೆ ಮಾಡಬೇಕು.ನಿಗದಿತ ಸಮಯದೊಳಗೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಬೇಕು.ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು.
ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಸನ್ನ ಕುಮಾರ್ ದೊಡ್ಡಮನೆ,ಸಿದ್ದೇಶ್ವರ ಶ್ರೀಗಳ ವಚನವನ್ನು ಹೇಳಿ ಮಣ್ಣಿನಿಂದಲೇ ದ್ರಾಕ್ಷಿ ಬೆಳೆಯುತ್ತದೆ,ಮಣ್ಣಿನಿಂದಲೇ ಹಣ್ಣು,ನವಧಾನ್ಯಗಳು ಬೆಳೆಯುತ್ತವೆ.ಆದರೆ ಹಣ್ಣು ತಿನ್ನುವಾಗ ನಾವು ಮಣ್ಣು ಅಂತ ತಿನ್ನುವುದಿಲ್ಲ. ಆದರೆ ಬೆಳೆದಿದ್ದೆಲ್ಲಾ ಮಣ್ಣಿನಿಂದಲೇ.ಆದರೆ ನಾವು ಕರೆಯುವ ಹೆಸರು ಮಾತ್ರ ಬದಲಾವಣೆ ಇರುತ್ತವೆ.ಕುಡಿಯುವ ನೀರು, ಸೇವಿಸುವ ಗಾಳಿ,ಸೂರ್ಯ-ಚಂದ್ರರು ಒಂದೇ. ನಮ್ಮ ಧರ್ಮವನ್ನು ಪೂಜಿಸಬೇಕು.ಇತರೆ ಧರ್ಮದವರನ್ನು ಪ್ರೀತಿಸಬೇಕು ಎಂದರು.
ಸೈಯದ್ ಅಬ್ದುಲ್ ರೆಮಾನ್,ಹಿರೇಕಾಂಶಿ ರಶೀದ್, ಅನ್ವರ್ ಭಾಷಾಮುಲ್ಲಾ,ನೂರ್ ಅಹಮದ್,ಅತಿಕುರ್ ರೆಹಮಾನ್,ಮೈನುದ್ದೀನ್,ಜಿ.ಕೆರಿಯಪ್ಪ,
ಸುರೇಶ್ ಭಂಡಾರಿ,ಸಂಜೀವಾಚಾರಿ,ಮಹೇಶ ಖಾರ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
-ಸಂದೀಪ ಯು.ಎಲ್.ನ್ಯೂಸ್,ಸೊರಬ