ನಿಜ ಬೆವರಿಳಿಸುವ ಬೇಸಿಗೆಯ ಧಗೆ ಧರೆಯನೇ ಹೊತ್ತಿ ಉರಿಸುತ್ತಿದೆ.ಮನೆಯಂಗಳದಿ ಆಟವಾಡುವ ಮಕ್ಕಳು ಒಂದು ಹೆಜ್ಜೆ ಈಡಲು ಸಹ ಹೆದರುವ ಸ್ಥಿತಿ ನಿರ್ಮಾಣವಾಗಿದೆ.ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಏರಿಕೆ ಕ್ರಮದಲ್ಲಿದೆ.ಇದರ ನಡುವೆ ಬಿಸಿಲಿನ ತಾಪಕ್ಕೆ ಸ್ಟ್ರೋಕ್ ಆಗಿ ಸಾವನ್ನಪ್ಪುವವರ ಸಂಖ್ಯೆಯೂ ದಿನೇದಿನೇ ಹೆಚ್ಚುತ್ತಿದೆ.ಇಷ್ಟೆಲ್ಲಾ ಆಗುತ್ತಿದ್ದರೂ ಬೇಸಿಗೆಯ ಬಿಸಿಯಲ್ಲಿ ಉರಿಯದೆ, ನರಳದೆ,ಕಾವು ಪಡೆದು ಜೀವಿಸುವವರೂ ಇದ್ದಾರೆ.
ಬೇಸಿಗೆಯ ಉಷ್ಣತೆಯಲಿ ಹೊಟ್ಟೆತುಂಬಿಸಿಕೊಂಡು ಕಣ್ಣು ಒದ್ದೆಮಾಡಿಕೊಳ್ಳುವ ಸಂಗತಿಗಳೂ ನಮ್ಮ ಕಣ್ಣಮುಂದಿವೆ.ಇದೇನು ಈ ಪರಿಯ ಬಿಸಿಲಿನ ತಾಪದಲ್ಲಿ ಕಾವು ಪಡೆಯುವವರಿದ್ದಾರೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ ಆದರೆ ಅದೇ ಸತ್ಯ.
ದಿನನಿತ್ಯವೂ ನಮಗೆ ರಸ್ತೆಬದಿಯಲ್ಲಿ ಹಣ್ಣಿನ ವ್ಯಾಪಾರಿಗಳು ಕಾಣುತ್ತಾರೆ.ಐಸ್‌ಕ್ರೀಂ,ಕೋಕೊ ಕೋಲಾ,ವಿವಿಧ ಹಣ್ಣಿನ ರಸ ತಂಪು ಪಾನೀಯಗಳನ್ನೂ ಮಾರುವವರು ಇದ್ದಾರೆ.ಇವರೆಲ್ಲಾ ಬೇಸಿಗೆಯನ್ನು ಉತ್ಸಾಹದಿಂದ,ಸಂತೋಷದಿಂದ ಸ್ವಾಗತಿಸುತ್ತಾರೆ.ಈ ಬೇಸಿಗೆಯ ಬಿಸಿಯನ್ನು ಆಸ್ವಾದಿಸುತ್ತಾರೆ.ಏನೋ ಒಂದು ವಿಷಯದ ಬಗ್ಗೆ ತೋಚಿದ್ದನ್ನ ಗೀಚಬೇಕು ಎಂದು ಗೀಚಿದ್ದಲ್ಲ ಈ ಬರೆಹ ವಾಸ್ತವದಲ್ಲಿ ಕಂಡು ಅನುಭವಕ್ಕೆ ಬಂದ ನಂತರ ವಾಸ್ತವಕ್ಕೆ ಅನ್ವಯಿಸಿ ಬರೆದದ್ದು.
ಬೇಸಿಗೆಯ ಬೇಗೆಯನ್ನು ಒಂದೇ ಕ್ರಮದಲ್ಲಿ ನೋಡದೇ ಹಲವಾರು ಹಾಗೂ ಹಲವರ ನೋಟದಲ್ಲಿ ನೋಡಬಹುದಾದ ಸಾಧ್ಯತೆ ಇದೆ.
ನಮ್ಮಲ್ಲಿ ಎಷ್ಟೋಜನ ಬಿಸಿಲಿನ ತಾಪಕ್ಕೆ ಹೆದರಿ ಹೊರಗಡೆ ಹೋಗದೆ ಮನೆಯಲ್ಲಿಯೇ ಇರುತ್ತಾರೆ. ಕಾಲಿಗೆ ಚಪ್ಪಲಿ ಇಲ್ಲದೆ ಒಂದು ಹೆಜ್ಜೆಯೂ ಇಡರು. ‘ಜೀವ ಹಿಂಡಿ ಸಾಯಿಸುತ್ತಿದೆ ಈ ಬಿಸಿಲು ಈ ವರ್ಷ ಯಾಕಪ್ಪ ಇಷ್ಟೊಂದು ಬಿಸಿಲು’ ಎಂದು ಹೇಳುತ್ತಾ ಸೂರ್ಯನ ರೌದ್ರಾವತಾರವ ತಾಳದೆ ಒಳಗೊಳಗೆ ಗೊಣಗುವ,ತಣ್ಣೀರು ಕುಡಿದು ತಣ್ಣಗಾಗುವವರು ಹಲವರು.ಆದರೆ,ಇನ್ನು ಕೆಲವರು ಅದೇ ಸೂರ್ಯನ ಕೃಪೆಯನ್ನು ನೆನೆದು ಸಂತಸ ಪಡುವ ಕ್ಷಣಗಳೂ ವಾಸ್ತವದಲ್ಲಿದೆ.
ನಡುವೆ ರೈತರು ವರುಣರಾಯನ ಕೃಪೆಯನ್ನು ಕೊರಿ ಪೂಜೆ ಪುನಸ್ಕಾರ ಮಾಡಿ ವರುಣರಾಯನ ಕೃಪೆ ನಮ್ಮ ಮೇಲಿರಲಿ ಎಂದು ಆರಾಧಿಸುತ್ತಾರೆ.ಆಫೀಸಿನಲ್ಲಿ ಕುಳಿತು ಕೆಲಸ ಮಾಡುವವರು ಮೂರು ಹೊತ್ತು ತಂಪು ಪಾನೀಯಗಳನ್ನು ತರಿಸಿಕೊಂಡು ಕುಡಿದು ಸ್ವಲ್ಪ ಕಾಲ ಶೃಂಗಸಭೆ ನಡೆಸುತ್ತಾರೆ.ಪ್ರತಿನಿತ್ಯ ಮನೆಯ ಎಲ್ಲಾ ಕೆಲಸಗಳನ್ನು ಮಾಡುವ ಗೃಹಿಣಿಯರು ಬೇಸಿಗೆಯಲ್ಲಿ ಅಡಿಗೆ ಮನೆಯಲ್ಲಿ ಕೆಲಸ ಮಾಡಲು ಬಲುಕಷ್ಟ ಎನ್ನುತ್ತಾ ನೆರೆಮನೆಯ ಹೆಂಗಸರ ಬಳಿ ಮಾತಾಡಿಕೊಂಡು ನೆತ್ತಿಗೇರಿದೆ ಸೂರ್ಯ ಕೊಂಚ ಇಳಿದು ತಣ್ಣಗಾಗುವವರೆಗೂ ಕಾಲತಳ್ಳುತ್ತಾ ಕುಳಿತುಕೊಳ್ಳುವುದು.ಅದೇರೀತಿ ಆಗ ತಾನೇ ಭೂಮಿಗೆ ಬಂದ ಎಳೆಯ ಕೂಸು,ತನಗಾದ ಅನುಭವವನ್ನು ಹೇಳಲಾಗದೆ,ತಾಳಲಾಗದೆ ಅಳುವುದು ಅದನ್ನು ಕಂಡ ತಾಯಿ ನರಳುತ್ತಾ ಅದನ್ನು ಸಮಾಧಾನ ಮಾಡಲು ಯತ್ನಿಸುವುದು ನಡೆಯುತ್ತಲೇ ಇರುತ್ತವೆ.ಈ ಎಲ್ಲದರ ನಡುವೆ ಹಣ್ಣು ಮತ್ತು ತಂಪುಪಾನೀಯಗಳ ವ್ಯಾಪಾರಿ ವರ್ಗವೊಂದು ಮಾತ್ರ ಸಂತೋಷಪಡುತ್ತದೆ.
ಇವರು ಸೂರ್ಯನನ್ನು ನೆನೆದು ಸಂತಸ ಪಡುವ ಕಾಲವೇ ಬೇಸಿಗೆಯ ಕಾಲ ಬೇಸಿಗೆಯ ತಾಪಕ್ಕೆ ಸಾಕಷ್ಟು ಹಣ್ಣು ದೊರೆಯುವುದಿಲ್ಲ ಹಾಗೂ ದರದ ಪ್ರಮಾಣದಲ್ಲೂ ಕೊಂಚ ತೊಂದರೆಯೇ ಆಗುತ್ತದೆ. ಆದರೂ ತನ್ನ ಹೆಂಡತಿ ಮಕ್ಕಳಿಗೆ ಹೊಟ್ಟೆತುಂಬಾ ಊಟ ಹಾಕುವ,ಮಕ್ಕಳ ಓದಿಗೆ ಕೊಂಚ ಹಣ ಸಂಗ್ರಹಿಸಿಕೊಳ್ಳುವ,ಮನೆಯ ಖರ್ಚನ್ನು ಸರಿದೂಗಿಸಿಕೊಳ್ಳುವಲ್ಲಿ ಅನುಕೂಲವಾಗುತ್ತದೆ. ದಣಿದು ಬಂದವರ ದಣಿವಿನ ಜೊತೆ ತನ್ನ ದಣಿವನ್ನೂ ನಿಗಿಸಿಕೊಳ್ಳುವ ಪರಿಯೇ ಹಿತ.
ಚಳಿಗಾಲದಲ್ಲಿ ಹಣ್ಣನ್ನು ಕೊಳ್ಳುವವರ,ತಂಪುಪಾನೀಯ ಸೇವಿಸುವವರ ಸಂಖ್ಯೆ ತೀರಾ ಕಡಿಮೆ.ಆದರೆ,ಬೇಸಿಗೆ ಬಂದ ತಕ್ಷಣ ಯಾವುದೇ ತಾರತಮ್ಯವಿಲ್ಲದೆ. ಕಡುಬಡವರಿಂದ ಹಿಡಿದು,ಶ್ರೀಮಂತರವರೆಗೆ ಎಲ್ಲರೂ ಕೊಂಡು ಸೇವಿಸುತ್ತಾರೆ.
ರಚನೆ:ಲೋಹಿತೇಶ್ವರಿ ಎಸ್ ಪಿ