ಬಸವಣ್ಣನ ವಿಶ್ವದ ಸಮಗ್ರ ಕ್ಷೇತ್ರಗಳ ನೇತಾರ:ಶ್ರೀ ತರಳಬಾಳು ಜಗದ್ಗುರುಗವರ ವಿಶ್ಲೇಷಣೆ
ಶ್ರೀ ಜಗದ್ಗುರುಗಳವರಿಂದ ದುಬೈ ಬಸವಾಭಿಮಾನಿಗಳಿಗೆ ಬಸವಾದಿ ಶರಣರ ಮೊಬೈಲ್ ಆಪ್ ಪ್ರಾತ್ಯಕ್ಷಿಕೆ ವಿವರಣೆ
ರಾಮಾಯಣದಲ್ಲಿ ಹನುಮಂತ ಲಂಕೆಗೆ ಹಾರಿ ಸೀತೆಯನ್ನು ರಕ್ಷಿಸಿದಂತೆ,ಉದ್ಯೋಗ ಬಯಸಿ ಭಾರತದಿಂದ ದುಬೈಗೆ ಹಾರಿಬಂದ ಸಾಗರದಾಚೆಯ ಕನ್ನಡಿಗರು ಬಸವಾಭಿಮಾನಿಗಳಾಗಿ ತಮ್ಮ ಮಕ್ಕಳಿಗೆ ವಚನ ಸಾಹಿತ್ಯ,ಸಂಸ್ಕೃತಿ ಬೆಳೆಸುತ್ತಿರುವುದು ಬಹು ಪ್ರಶಂಸನೀಯ ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಶಂಸೆ ವ್ಯಕ್ತಪಡಿಸಿದರು.
ಯು.ಎ.ಇ ಬಸವ ಸಮಿತಿ ದುಬೈ ವತಿಯಿಂದ 17ನೆ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ,ಉದ್ಘಾಟಿಸಿ ಆಶೀರ್ವಚನ ದಯಪಾಲಿಸಿದ ಶ್ರೀ ಜಗದ್ಗುರುಗಳವರು ಬಸವಜಯಂತಿ ಕಾರ್ಯಕ್ರಮದ ನಿಮಿತ್ತ ಬಸವಾದಿ ಶರಣರನ್ನು ಸ್ಮರಿಸುವ ಸ್ತುತ್ಯಾರ್ಹ ಕಾರ್ಯವು ಅರ್ಥಪೂರ್ಣವಾಗಿದ್ದು ಆಚರಣೆಗೆ ಮಾತ್ರ ಸೀಮಿತವಾಗದೆ ಶರಣರ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಜಗತ್ತಿನ ಐತಿಹ್ಯದ ಹೋರಾಟಗಾರರು ಒಂದೇ ಕ್ಷೇತ್ರದಲ್ಲಿ ಛಾತಿ ಮೂಡಿಸಿದ ಕ್ರಾಂತಿಕಾರಿಗಳಾಗಿದ್ದರೆ, ಬಸವಣ್ಣನವರು ಸಾಂಸ್ಕೃತಿಕ ವಲಯದ ಪರಿಮಿತಿಗೆ ಬಸವಣ್ಣನವರು ಒಳಪಡದೆ ಆಧ್ಯಾತ್ಮಿಕ,ಧಾರ್ಮಿಕ, ಸಾಹಿತ್ಯಿಕ,ಸಾಂಸ್ಕೃತಿಕ,ರಾಜಕೀಯ,ಆರ್ಥಿಕ,ಕರುಣೆ, ಜಾತ್ಯಾತೀತ,ಕ್ರಾಂತಿಕಾರಕ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳನ್ನು ಉದ್ಧರಿಸಿದ ವಿಶ್ವದ ಏಕಮೇವಾದ್ವೀತೀಯ ಪ್ರವರ್ತಕರು,ಇತ್ತೀಚೆಗೆ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದು ಸರಿಯಾಗಿದ್ದರು,ಬಸವಣ್ಣನವರು ವಿಶ್ವದ ಸಮಗ್ರ ನಾಯಕ ಎಂದು ಎಂದು ಔಚಿತ್ಯ ಪೂರ್ಣವಾಗಿ ವಿಶ್ಲೇಷಿಸಿದರು.
ಬಸವಾದಿ ಶರಣರ ವಚನಗಳು ಷಟ್ಸ್ತಲಗಳ ಆಧಾರದ ಮೇಲೆ ರಚಿತವಾಗಿವೆ ಎಂಬ ಅಭಿಪ್ರಾಯ ಇದೆ.ಆದರೆ ನಮ್ಮ ಅಭಿಪ್ರಾಯದಲ್ಲಿ ಶರಣರ ಎಲ್ಲಾ ವಚನಗಳು ಜನ ಸಾಮಾನ್ಯರ ಸಾಮಾಜಿಕ,ಧಾರ್ಮಿಕ,ಆಧ್ಯಾತ್ಮಿಕ, ರಾಜಕೀಯ,ಕಾಯಕದ ಅನುಭವದಲ್ಲಿ ರಚಿತವಾಗಿವೆ ಎಂಬುದಕ್ಕೆ ವಚನಗಳಲ್ಲಿಯೇ ಉತ್ತರವಿದೆ ಎಂದು ಒಳಾರ್ಥವನ್ನು ವಿವರಿಸಿದರು.
ನಮ್ಮನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡ ಮಹಿಳೆಯರು ಆರತಿ ಬೆಳಗಿ ಸಂಪ್ರದಾಯ ಮೆರೆದರು, ನಮ್ಮ ಮಹಿಳೆಯರು ಆರತಿಯನ್ನು ಬೆಳಗುವುದರ ಜೊತೆ ಸಂದರ್ಭ ಬಂದರೆ ಒನಕೆ ಓಬವ್ವ,ಕಿತ್ತೂರ ಚೆನ್ನಮ್ಮ ನಂತೆ ಹೋರಾಡ ಬಲ್ಲರು ಎಂದು ಮಹಿಳಾ ಶಕ್ತಿಯನ್ನು ಅರ್ಥೈಸಿದರು.
ಎದೆಯ ಮೇಲೆ ಲಿಂಗ ಇರದಿದ್ದರೂ ಎಲ್ಲರ ಕೈಯಲ್ಲೂ ಈಗ ಮೊಬೈಲ್ ಇದ್ದೇ ಇದೆ.ನಾವು ಬಹು ಶ್ರಮ ವಹಿಸಿ ಹೊರ ತಂದಿರುವ ಶಿವ ಶರಣರ ವಚನ ಸಂಪುಟವು ಎಲ್ಲರ ಮೊಬೈಲ್ ಗಳಲ್ಲಿ ಲಭ್ಯವಿದೆ ಎಂದು ಮಾರ್ಮಿಕವಾಗಿ ನುಡಿದ ಪೂಜ್ಯರು ಮೊಬೈಲ್ ಆಪ್ ಪ್ರಾತ್ಯಕ್ಷಿಕೆಯನ್ನು ದುಬೈ ಬಸವಾಭಿಮಾನಿಗಳಿಗೆ ಉಣಬಡಿಸಿದರು.ಹಲವಾರು ಭಾಷೆಗಳಲ್ಲಿ ತರ್ಜುಮೆಗೊಂಡ ಶರಣರ 22 ಸಾವಿರ ವಚನಗಳು ವಿವಿಧ ಭಾಷೆಗಳಲ್ಲಿ ಲಭ್ಯವಿದ್ದು ವಿದೇಶಗಳಲ್ಲಿ ಇರುವ ನಿಮಗೆ ನಿಮ್ಮ ಮಕ್ಕಳಿಗೆ ಅನುಕೂಲವಾಗಿದೆ ಈ ಆಪ್ ಮೂಲಕ ವಚನ ಪಠಣ ಮಾಡುವಂತೆ ಮಾರ್ಗದರ್ಶನ ಮಾಡಿದರು.
ಅಲ್ಲಮ ಪ್ರಭುಗಳು ವಚನ ಉಲ್ಲೇಖಿಸಿದ ಪೂಜ್ಯರು
ದೇವರು ಬ್ರಹ್ಮಾಂಡದ ಒಳ ಒರೆಗೆ ಇದ್ದಾನೆ ಎಂಬುದನ್ನು ಇದ್ದಲ್ಲಿಯೇ ಒಳಗಣ್ಣಿನಿಂದ ಕಂಡುಕೊಳ್ಳಲು ಬಸವಣ್ಣನವರು ಇಷ್ಟ ಲಿಂಗ ಕರುಣಿಸಿದರು.ದೇವರನ್ನು ದರ್ಶಿಸುವ ದರ್ಶಕವೇ ಲಿಂಗವಾಗಿದೆ.ಬಸವಣ್ಣನವರ ಹೃದಯವು ಶರಣರ ಸಂಘಕ್ಕೆ ಸದಾ ಮಿಡಿಯುತ್ತಿತ್ತು.ಈ ಜಗತ್ತಿನಲ್ಲಿ ಅಸಂಖ್ಯಾತ ಜನರು ಮರೆಯಾಗಿದ್ದಾರೆ.ಆದರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದರು ಮಾತ್ರ ಪ್ರಾತಃ ಸ್ಮರಣೀಯರಾಗಿದ್ದಾರೆ ಅದರಲ್ಲಿ ಬಸವಣ್ಣನವರು ಮನುಕುಲ ಜಗತ್ತಿನ ಉದ್ದಾರಕ್ಕೆ ಉದಯಿಸಿದ ಯುಗ ಪ್ರವರ್ತಕರು ಎಂದು ಮನಸಾ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ಖಾಸಾಮಠ ಗುರುಮಠಕಲ್ ಆಶೀರ್ವಚನ ನೀಡಿದರು.
ದುಬೈ ಕೌನ್ಸಿಲ್ ನ ಶ್ರೀ ಸತೀಶ್ ಶಿವನ್,ನಿವೃತ್ತ ಐಎಎಸ್ ಅಧಿಕಾರಿ,ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸೋಮಶೇಖರ್,ಖ್ಯಾತ ಚಲನ ಚಿತ್ರ ನಟ ಶ್ರೀ ದೊಡ್ಡಣ್ಣ ಯು.ಎ.ಇ ಬಸವ ಸಮಿತಿ ಅಧ್ಯಕ್ಷ ಡಾ.ಬಸವರಾಜ ಹೊಂಗಲ,ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದುಬೈ ಬಸವಾಭಿಮಾನಿಗಳ ಮಕ್ಕಳಿಂದ ವಚನ ನೃತ್ಯ, ಭಕ್ತಿ ಗೀತೆಗಳ ರೂಪಕಗಳು ಜನಮನ ರಂಜಿಸಿದವು.