ಶಿವಮೊಗ್ಗ/ಚಿಕ್ಕಮಗಳೂರು/ಉಡುಪಿ:ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ನೈಋತ್ಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು 24.111 ಮತಗಳ ಅಂತರದಿಂದ ಭರ್ಜರಿ ಜಯಗಳಿಸುವ ಮೂಲಕ ಇದೇ ಪ್ರಥಮ ಬಾರಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ.
ಜೂನ್ 3 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗುರುವಾರ ನಡೆದಿದ್ದು,ಪ್ರತಿ ಸುತ್ತಿನಲ್ಲೂ ಡಾ.ಧನಂಜಯ ಸರ್ಜಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು.
ಅಂತಿಮವಾಗಿ ಚಲಾವಣೆಯಾದ 66.497 ಮತಗಳಲ್ಲಿ 5.115 ಮತಗಳು ತಿರಸ್ಕೃತಗೊಂಡಿವೆ.ಇನ್ನುಳಿದ 61.382 ಮತಗಳಲ್ಲಿ ಡಾ.ಸರ್ಜಿ ಅವರು 37.627 ಮತ ಗಳಿಸಿ,ವಿಜಯಮಾಲೆ ಧರಿಸಿದ್ದಾರೆ.ಕಾಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರ ವಿರುದ್ಧ 24.111 ಮತಗಳ ಅಂತರದಲ್ಲಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಡಾ.ಧನಂಜಯ ಸರ್ಜಿ ಗೆಲುವಿನ ನಗೆ ಬೀರಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ 13.516 ಮತಗಳನ್ನು ಮಾತ್ರ ಪಡೆದು ಸೋಲು ಕಂಡಿದ್ದಾರೆ.ಪಕ್ಷೇತರವಾಗಿ ಬಿಜೆಪಿಗೆ ಸಡ್ಡು ಹೊಡೆದಿದ್ದ ರಘುಪತಿ ಭಟ್ ಕೂಡಾ ಸೋಲು ಕಂಡಿದ್ದಾರೆ.
ಮೈಸೂರಿನಲ್ಲಿ ಗುರುವಾರ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮೊದಲನೇ ಪ್ರಾಶಸ್ತ್ರದಲ್ಲೇ ಅಭೂತಪೂರ್ವ ಗೆಲುವು ಸಾಧಿಸಿ ವಿಧಾನ ಪರಿಷತ್ ಗೆ ಆಯ್ಕೆ ಆದ ಬಳಿಕ ಚುನಾವಣಾಧಿಕಾರಿಗಳು ಡಾ.ಧನಂಜಯ ಸರ್ಜಿ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ಪತ್ನಿ ಶ್ರೀಮತಿ ನಮಿತಾ ಸರ್ಜಿ,ಸೋದರ ಹರ್ಷ ಸರ್ಜಿ,ಶ್ರೀಮತಿ ನಾಗವೇಣಿ ಸರ್ಜಿ ಹಾಗೂ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ಟಿ.ಡಿ.ಮೇಘರಾಜ್,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಚ್.ಮಾಲತೇಶ್, ಶಿವರಾಜ್,ಜಿಲ್ಲಾ ಪ್ರಮುಖರಾದ ಮಧುಸೂದನ್, ದೇವರಾಜ್,ಡಾ.ಶ್ರೀನಿವಾಸ್ ರೆಡ್ಡಿ,ಎನ್.ಡಿ.ಸತೀಶ್, ವಿಕ್ರಮ್,ಧರ್ಮಪ್ರಸಾದ್,ವಿಕಾಸ್ ಯಳನೂರ್, ಸುರೇಖಾ ಮುರುಳೀಧರ್,ರಶ್ಮಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಸರ್ಜಿ ಅವರ ಗೆಲುವು ಬಿಜೆಪಿ ಕಾರ್ಯಕರ್ತರಲ್ಲಿ ಸಂತಸ ತಂದಿದೆ ಕಳೆದ ವಿಧಾನಸಭೆಗೆ ಇವರ ಹೆಸರು ಮುಂಚೂಣಿಗೆ ಬಂದಿತ್ತು ಆದರೆ ಆಗ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ ಸ್ಥಾನ ಬಿಟ್ಟುಕೊಟ್ಟಿದ್ದರು. ಇದೀಗ ವಿಧಾನ ಪರಿಷತ್ ಸದಸ್ಯರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದಾರೆ.
ವರದಿ:ಕೆ ಆರ್ ಶಂಕರ್,ಭದ್ರಾವತಿ