ಶಿವಮೊಗ್ಗ:ಯಶಸ್ವಿನಿ ಯೋಜನೆಯಡಿ ಬರುವ ದರ ಕಡಿಮೆಯಿದ್ದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಈ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದವು.ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದು ಕಷ್ಟವಾಗಿತ್ತು. ಇದನ್ನು ಅರಿತ ರಾಜ್ಯ ಸರ್ಕಾರ ಯೋಜನೆಯ ಚಿಕಿತ್ಸಾ ದರವನ್ನು ಶೇ 300 ರವರೆಗೂ ಹೆಚ್ಚಳ ಮಾಡಿದೆ. ಪರಿಣಾಮ 370ರಷ್ಟಿದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ 600ರ ಗಡಿ ದಾಟಿದೆ.
ಈ ಯೋಜನೆಯಡಿ 2,128 ಚಿಕಿತ್ಸೆಗಳು ಲಭ್ಯವಾಗಲಿದ್ದು, ಈ ಪೈಕಿ 206 ಚಿಕಿತ್ಸೆಗಳ ದರ ಪರಿಷ್ಕರಣೆ ಮಾಡಲಾಗಿದೆ. ಈ ಮೊದಲು ಯೋಜನೆಯಡಿ 1,650 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿತ್ತು. ಯೋಜನೆಯಡಿ ಒಟ್ಟು 637 ನೆಟ್‌ವರ್ಕ್ ಆಸ್ಪತ್ರೆಗಳು ನೋಂದಣಿಯಾಗಿದ್ದು, ಇದರಲ್ಲಿ 602 ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿವೆ.
ಯಶಸ್ವಿನಿ ಯೋಜನೆಯಡಿಯೂ ಫಲಾನುಭವಿಗಳು ಗರಿಷ್ಠ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯಡಿ ವ್ಯಕ್ತಿಯು ನೆಟ್‌ವರ್ಕ್ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು. ಇದರಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಸುಲಭ ಸಾಧ್ಯವಾಗಲಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ