ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಜೂನ್ 16 ರಂದು ಬೃಹತ್ ಆರೋಗ್ಯ ತಪಾಸಣಾ ಹಾಗೂ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಎಚ್ ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ತಿಳಿಸಿದರು.
ಹನೂರು ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹನೂರು ಕ್ಷೇತ್ರದ ಕಾಡಂಚಿನ ಗ್ರಾಮಗಳ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ,ಕಿವಿ ಮತ್ತು ಗಂಟಲು ಕಾಯಿಲೆ,ಹೃದಯ ಸಂಬಂಧಿ ಕಾಯಿಲೆ,ಶ್ವಾಸಕೋಶ ಸಂಬಂಧಿ ಕಾಯಿಲೆ, ಮೂಳೆ ಹಾಗೂ ಸ್ನಾಯು ಸಂಬಂಧಿ ಕಾಯಿಲೆ, ಸಾಮಾನ್ಯ ವೈದ್ಯಕೀಯ,ತಪಾಸಣೆ ಕಣ್ಣಿನ ಪೊರೆ, ಬ್ಲಾಕ್ ಕೋಮ ನೀರು ಸೋರುವಿಕೆ ಕಣ್ಣಲ್ಲಿ ಗೀಚು ಬರುವುದು ಹತ್ತಿರ ಹಾಗೂ ದೂರ ದೃಷ್ಟಿ,ರಾತ್ರಿ ಕುರುಡುತನ ಇತ್ಯಾದಿ ಕಣ್ಣಿನ ತೊಂದರೆ ಇರುವವರು ಈ ಬೃಹತ್ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ರೋಟರಿ ಮಿಡ್ ಟೌನ್ ಅಧ್ಯಕ್ಷ ದಕ್ಷಿಣ ಮೂರ್ತಿ ಮಾತನಾಡಿ ಎಚ್ ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಾಲೂರು ಬೃಹನ್ ಮಠ ರೋಟರಿ ಮಿಡ್ ಟೌನ್ ಹಾಗೂ ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ಬೃಹತ್ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಮೊಬೈಲ್ ನಂಬರ್ ಕಡ್ಡಾಯವಾಗಿ ತರಬೇಕು, ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಳೆದುಕೊಳ್ಳಬೇಕು ಕಣ್ಣಿನ ಪೊರೆ ಇದೆ ಎಂದು ತೀರ್ಮಾನಿಸಲ್ಪಟ್ಟವರನ್ನು ಅದೇ ದಿನ ಮಧ್ಯಾಹ್ನ ಕೊಯಂಬತ್ತೂರಿನ ಅರವಿಂದ ಕಣ್ಣಾಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗುವುದು ಎಲ್ಲವೂ ಉಚಿತವಾಗಿರುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ಡ್ರೈವಿಂಗ್ ಶಾಲೆಯ ಮಾಲೀಕರು ಹಾಗೂ ಎಚ್ ಕೆ ಟ್ರಸ್ಟ್ ಸಂಯೋಜಕ ರಾಜೇಶ್ ಹಾಜರಿದ್ದರು.
ವರದಿ:ಉಸ್ಮಾನ್ ಖಾನ್