ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ರಾಮನಗೌಡ, ಲೋಕಗೌಡ ಹಾಗೂ ಸುಲೋಚನಾ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೆಸ್ಕಾಂ ವಿರುದ್ದ ಸೇವಾ ನ್ಯೂನ್ಯತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಸಲ್ಲಿಸಿದ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಆಯೋಗವು ಅರ್ಜಿದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಎದುರುದಾರ ಮೆಸ್ಕಾಂ ಆದೇಶಿಸಿದೆ.
ಅರ್ಜಿದಾರರು ಸೊರಬ ತಾಲ್ಲೂಕಿನ ಕೊಪ್ಪದಾಲ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಿದ್ದು 4 ಎಕರೆ 3 ಗುಂಟೆ ಜಮೀನಿನಲ್ಲಿ ಕಬ್ಬನ್ನು ಬೆಳೆದಿರುತ್ತಾರೆ. ಕಬ್ಬಿಗೆ ನೀರಿನ ಸೌಲಭ್ಯ ಪಡೆಯುವುದಕ್ಕಾಗಿ ಎದುರುದಾರರಿಂದ ವಿದ್ಯುತ್ ಸಂಪರ್ಕವನ್ನು ಪಡೆದು ಕೊಳವೆ ಬಾವಿಯನ್ನು ಹೊಂದಿರುತ್ತಾರೆ.
26-12-2022 ರಂದು ಅರ್ಜಿದಾರರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಅದರ ಪರಿಣಾಮವಾಗಿ ಸದರಿ ತಂತಿಗಳು ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಕಿಡಿಗಳು ಉತ್ಪತ್ತಿಯಾಗಿ ಬೆಳೆದಿರುವಂತಹ ಕಬ್ಬಿನ ಮೇಲೆ ಬಿದ್ದ ಪರಿಣಾಮ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಹೋಗಿರುತ್ತದೆ.
ಅರ್ಜಿದಾರರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿ ಎದುರುದಾರರ ನಿರ್ಲಕ್ಷ್ಯದಿಂದಾಗಿ ಜಮೀನಿನಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಜೋತುಬಿದ್ದಿರುವ ಬಗ್ಗೆ ಮತ್ತು ಆ ತಂತಿಗಳನ್ನು ಸರಿಪಡಿಸುವ ಬಗ್ಗೆ ಸಾಕಷ್ಟು ಬಾರಿ ತಿಳಿಸಿದ್ದಾಗ್ಯೂ ಎದುರುದಾರರು ವಿದ್ಯುತ್ ತಂತಿಗಳನ್ನು ಸರಿಪಡಿಸಿರುವುದಿಲ್ಲ. ಪರಿಣಾಮವಾಗಿ ವಿದ್ಯುತ್ ತಂತಿಗಳ ಸ್ಪರ್ಶದಿಂದ ಬೆಂಕಿ ಉಂಟಾಗಿ ಜಮೀನಿನಲ್ಲಿ ಬೆಳೆದಿದ್ದ ಅಂದಾಜು 225 ಟನ್ ಕಬ್ಬು ಸಂಪೂರ್ಣ ಸುಟ್ಟುಹೋಗಿರುತ್ತದೆ. ಆದ್ದರಿಂದ ಎದುರಾದರು ತಮ್ಮ ಸೇವಾ ನ್ಯೂನ್ಯತೆಯಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ರೂ.8,25,000/- ಗಳಷ್ಟು ಪರಿಹಾರವನ್ನು ಶೇ.18 ಬಡ್ಡಿಯೊಂದಿಗೆ ಪಾವತಿಸುವಂತೆ ಕೋರಿರುತ್ತಾರೆ.
ಎದುರುದಾರರು ಈ ಬೆಂಕಿ ಅವಘಡವು ವಿದ್ಯುತ್ ತಂತಿಗಳ ಸ್ಪರ್ಶದಿಮದ ಉಂಟಾಗಿರದೇ, ದಾರಿಹೋಕರು ಎಸೆದಿರುವ ಬೀಡಿ, ಸಿಗರೇಟ್ ಇತ್ಯಾದಿಗಳಿಂದ ಉಂಟಾಗಿರುವ ಸಂಭವವಿದೆ ಎಂದು ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಆದರೆ ಈ ಹೇಳಿಕೆಗೆ ಪೂರಕವಾದ ಯಾವುದೇ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸಿರುವುದಿಲ್ಲ ಮತ್ತು ಎದುರುದಾರರು ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯು ಚಾಲ್ತಿಯಲ್ಲಿರುವುದರಿಂದ ಆಯೋಗವು ಪ್ರಕರಣವನ್ನು ವಿಚಾರಣೆ ಮಾಡಲು ಬರುವುದಿಲ್ಲವೆಂದು ತಿಳಿಸಿರುತ್ತಾರೆ.
ಆಯೋಗವು ಪ್ರಕರಣದಲ್ಲಿ ಹಾಜರುಪಡಿಸಿರತಕ್ಕಂತ ದಾಖಲೆಗಳು ಮತ್ತು ಪಕ್ಷಗಾರರ ಹೇಳಿಕೆಗಳನ್ನು ಪರಿಶೀಲಿಸಿ, ಅರ್ಜಿದಾರರ ಜಮೀನಿನಲ್ಲಿ ಉಂಟಾದ ಕಬ್ಬಿನ ಬೆಳೆಯ ನಾಶಕ್ಕೆ ವಿದ್ಯುತ್ ತಂತಿಗಳ ಸಂಪರ್ಕವೇ ಕಾರಣವೆಂದು ತೀರ್ಮಾನಿಸಿ ಪ್ರಸ್ತುತ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಎದುರುದಾರರು ಕಬ್ಬಿನ ಬೆಳೆಯಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ರೂ.5,00,000/-ಗಳನ್ನು ವಾರ್ಷಿಕ ಶೇ.9 ಬಡ್ಡಿ ಸಮೇತ ಪಾವತಿಸಬೇಕು ಮತ್ತು ರೂ.50,000/- ಗಳನ್ನು ಅರ್ಜಿದಾರರಿಗೆ ಉಂಟಾ ಮಾನಸಿಕ ಹಾನಿಗೆ ಹಾಗೂ ರೂ.10,000 ಗಳನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ಪಾವತಿಸಬೇಕೆಂದು ನಿರ್ದೇಶಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಡ್ಯ ಇವರ ಪೀಠವು ದಿ: 12-06-2024 ಎಂದು ಆದೇಶಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್