ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ವ್ಹಿ.ಮ.ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ,ಸಾಹಿತಿ ಡಾ.ನಾಗರತ್ನ ಅಶೋಕ ಭಾವಿಕಟ್ಟಿ ಅವರು ಇಳಕಲ್ಲ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದಿಂದ ಕೊಡ ಮಾಡುವ ಫ.ಗು.ಹಳಕಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಳಕಲ್ಲನಲ್ಲಿ ಜುಲೈ.2ರಂದು ಸಂಜೆ 5ಕ್ಕೆ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ನಡೆಯುವ ವಚನ ಸಾಹಿತ್ಯ ಸಂರಕ್ಷಣಾ ದಿನದಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಡಾ.ನಾಗರತ್ನ ಅಶೋಕ ಭಾವಿಕಟ್ಟಿ ಅವರು ವಚನ ಸಾಹಿತ್ಯ ಪರಿಷತ್‍ನ ಹುನುಗಂದ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಲವಾರು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಉಪನ್ಯಾಸ ಮತ್ತು ಗೋಷ್ಠಿಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.ಮಹಿಳೆಯರ ಹಕ್ಕುಗಳು,ಮಹಿಳೆಯರ ಸಬಲೀಕರಣ ಕುರಿತಂತೆ ಉಪನ್ಯಾಸ ನೀಡಿದ್ದಾರಲ್ಲದೆ ಮಾನವ ಹಕ್ಕುಗಳ ಕುರಿತಂತೆ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿಯೂ ಗಮನ ಸೆಳೆದಿದ್ದಾರೆ.
ವಚನ ಸಾಹಿತ್ಯ ಪರಿಷತ್‍ನಿಂದ ಹುನಗುಂದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ವಚನಗಳ ವಾಚನ ಸ್ಪರ್ಧೆ ಏರ್ಪಡಿಸಿ ಸಾವಿರಾರು ವಿದ್ಯಾರ್ಥಿಗಳು ಸುಲಲಿತವಾಗಿ ವಚನಗಳನ್ನು ಪಠಿಸುವಂತೆ ಮಾಡುವಲ್ಲಿ ಮೇಲ್ಪಂಕ್ತಿ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವಾರ್ಷೀಕೋತ್ಸವದಲ್ಲಿ ಭಾಗವಹಿಸಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ಕುರಿತಂತೆ ಉಪನ್ಯಾಸ, ಬೆಳಗಾವಿ ಜಿಲ್ಲೆಯ ಅಥಣಿಯ ಸವದಿಯಲ್ಲಿನ ವಿಜಯಮಹಾಂತೇಶ ಶಾಖಾ ಮಠದಲ್ಲಿ ಮಹಿಳೆಯರ ಬವಣೆಗಳು,ವಚನ ಸಾಹಿತ್ಯ ಕುರಿತಂತೆ ಉಪನ್ಯಾಸ ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‍ನಿಂದ ನಡೆದ ಎರಡನೇ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ “ವಚನ ಸಾಹಿತ್ಯದಲ್ಲಿ ಮಹಿಳೆ”ವಿಷಯವನ್ನು ಮಂಡಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ “ಮಹಿಳೆ ಸಮಗ್ರತೆ ಪ್ರತಿನಿಧೀಕರಣ”ಕುರಿತು ವಿಚಾರ ಮಂಡಿಸಿದ್ದಾರೆ.ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ,ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯಕ್ರಮದಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಅವರಿಗೆ 2017ನೇ ಸಾಲಿನ ಬಳ್ಳಾರಿಯ ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಕೊಡಮಾಡುವ ಪ್ರತಿಷ್ಠಿತ ಡಾ.ಎಚ್.ಎನ್.ಪ್ರಶಸ್ತಿಗೆ ಭಾಜನರಾಗಿದ್ದಾರೆ,ಇದರ ಜತೆಯಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಇವರ ಸೇವೆಯನ್ನು ಗುರುತಿಸಿದ ಇಳಕಲ್ಲ ಚಿತ್ತರಗಿ ವಿಜಯಮಹಾಂತೇಶ ಸಂಸ್ಥಾನಮಠ ಪ್ರತಿಷ್ಠಿತ ಫ.ಗು.ಹಳಕಟ್ಟಿ ಪ್ರಶಸ್ತಿ ನೀಡಿ ಗೌರವಿಸಲಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.