ವಿಜಯನಗರ/ಕೊಟ್ಟೂರು:ಶಾಲಾ ಕಾಲೇಜುಗಳಲ್ಲಿ ಸರ್ಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿಗೆ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಶ್ರೀ ಅಮರೇಶ್ ಜಿ ಕೆ ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು.
ಪ್ರಾಥಮಿಕ ಮತ್ತು ಪ್ರೌಢಶಾಲೆಯು ನಮ್ಮ ವ್ಯಾಪ್ತಿಗೆ ಬರುತ್ತಿದ್ದು,ಕಾಲೇಜಿನ ವ್ಯಾಪ್ತಿ ಡಿ.ಡಿ.ಪಿ.ಐ. ಇವರ ವ್ಯಾಪ್ತಿಗೆ ಬರುತ್ತಿರುವ ಕಾರಣ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಂಸ್ಥೆಯವರನ್ನು ಆಹ್ವಾನಿಸಲಾಗಿದೆ. ಪ್ರತಿಯೊಂದು ಸಂಸ್ಥೆಯವರು ತಾವು ಪಡೆಯುತ್ತಿರುವ ಶಾಲಾ ಶುಲ್ಕದ ಮಾಹಿತಿಯನ್ನು ಪ್ರವೇಶ ದ್ವಾರದಲ್ಲಿ ಕಾಣುವಂತೆ ಹಾಕಬೇಕು ಹಾಗೂ ಇಸಿಒ ಮತ್ತು ಸಿಆರ್ಪಿ ಇವರು 3 ದಿನದೊಳಗೆ ಈ ಬಗ್ಗೆ ಪ್ರತಿಯೊಂದು ಸಂಸ್ಥೆಗೆ ಭೇಟಿ ನೀಡಿ ಜಿಪಿಎಸ್ ಫೋಟೋವನ್ನು ಹಾಕುವಂತೆ ಸೂಚಿಸಿದರು.ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳನ್ನು ಉತ್ತೇಜಿಸುವ ಉದ್ದೇಶದಿಮದ 24 ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ & ಯುಕೆಜಿ ಹಾಗೂ 20 ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿದ್ದು ಈ ಬಗ್ಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಿ ಪ್ರೋತ್ಸಾಹಿಸುವಂತೆ ಸಭೆಯಲ್ಲಿ ಕೋರಿದರು.
ಸಭೆಯಲ್ಲಿ ಡಿಎಸ್ಎಸ್ ಜಿಲ್ಲಾ ಮುಖಂಡರಾದ ಬದ್ದಿ ಮರಿಸ್ವಾಮಿ,ಸಿಪಿಐ(ಎಂಎಲ್) ಲಿಬಿರೇಷನ್ ಪಕ್ಷದ ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ, ಎಐಎಸ್ಎ ಸಂಘದ ರಾಜ್ಯ ಸಂಚಾಲಕ ಸಂತೋಷ್ ಗುಳಿದಟ್ಟಿ, ರೈತ ಮುಖಂಡರಾದ ಭರಮಪ್ಪ, ಜಯಪ್ರಕಾಶ್ ನಾಯ್ಕ ಹಾಗೂ ಇತರೆ ಸಂಘಟನೆಯವರು ಮತ್ತು ಪಟ್ಟಣದ ಖಾಸಗಿ ಶಾಲೆಗಳ ಮುಖ್ಯಗುರುಗಳೊಂದಿಗೆ ಪರಸ್ಪರ ಚರ್ಚಿಸುತ್ತಾ, ಪ್ರತಿಯೊಂದು ಶಾಲೆಯವರು ವಸೂಲಾತಿ ಮಾಡುವ ಶಾಲಾ ಶುಲ್ಕದ ಮಾಹಿತಿಯನ್ನು ಪಡೆದರು.
ಸರ್ಕಾರದ ಆರ್.ಟಿ.ಇ. ನಿಯಮದಂತೆ ಫೀಯನ್ನು ವಸೂಲಿ ಮಾಡಬೇಕು.ಶಿಕ್ಷಣ ವ್ಯಾಪಾರವಾಗಬಾರದು. ಪೋಷಕರಿಗೆ ಹೊರೆಯಾಗದಂತೆ ಶಾಲಾ ಶುಲ್ಕವನ್ನು ಪಡೆಯಬೇಕು.ನಿಯಮಬಾಹಿರವಾಗಿ ಅನಾವಶ್ಯಕ ಹೆಚ್ಚಿನ ಫೀ ವಸೂಲಿ ಮಾಡುವ ಬಗ್ಗೆ ದೂರುಗಳು ಬಂದಲ್ಲಿ ನಿಯಮಾನುಸಾರ ಕ್ರಮಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರರು ಎಚ್ಚರಿಸಿದರು.
ಸಭೆಯಲ್ಲಿ ಇಸಿಒ ಎಸ್ ನಿಂಗಪ್ಪ,ಅಜ್ಜಪ್ಪ ಸಿಆರ್ಪಿ ಪಟ್ಟಣದ ಖಾಸಗಿ ಶಾಲೆಗಳ ಮುಖ್ಯ ಗುರುಗಳು ಹಾಜರಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು.