ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಚಿಕ್ಕಕುರುಬರಹಳ್ಳಿ ಗ್ರಾಮದ ಹಳೆ ಸರ್ವೆ ನಂ 50/1 ಹಾಗೂ ಹೊಸ ಸರ್ವೆ ನಂ.50/4 ರಲ್ಲಿ 06-10 ಗುಂಟೆ ಜಮೀನಿನಲ್ಲಿ ಗ್ರಾಮೀಣ ಭಾಗದ ರೈತರಿಗೆ ಯಾವುದೇ ನೋಟೀಸ್ ನೀಡದೆ ಹಾಗೂ ಸರ್ವೆ ಮಾಡಿಸದೆ ಅವರಿಗೆ ಇಷ್ಟ ಬಂದ ಹಾಗೆ ದೌರ್ಜನ್ಯದಿಂದ ಕಾಂಪೌಂಡ್ ಹಾಕಲು ಯತ್ನಿಸುತ್ತಿರುವುದನ್ನು ವಿರೋಧಿಸಿದ್ದಾರೆ.
ಗುಡಿಬಂಡೆ ತಾಲ್ಲೂಕು ಚೆಂಡೂರು ಗ್ರಾಮದ ಆದಿನಾರಾಯಣಪ್ಪ, ನಾರಾಯಣಪ್ಪ, ವೆಂಕಟರಮಣಪ್ಪ, ಮಾರಮ್ಮ ಹಾಗೂ ಪಾಪಣ್ಣ ರೈತರು ಮುಂಗಾರಿನಲ್ಲಿ ತಮ್ಮ ಸ್ವಾಧೀನ ಅನುಭವದಲ್ಲಿ ಇರುವ ಜಮೀನಿನಲ್ಲಿ ಬೆಳೆಗಳನ್ನು ಇಟ್ಟುಕೊಂಡಿರುತ್ತಾರೆ. ಬುಧವಾರ ಮಧ್ಯಾಹ್ನ ಸ್ಥಳೀಯ ಹಾಗೂ ಅಕ್ಕ ಪಕ್ಕದ ರೈತರ ಜಮೀನುಗಳಿಗೆ ಬೆಂಗಳೂರಿನ ಭೂಮಾಫಿಯಾ ಅವರು ಯಾವುದೇ ಮಾಹಿತಿ,ನೋಟೀಸ್ ಹಾಗೂ ಸರ್ವೆ ಮಾಡಿಸದೆ ಏಕಾ ಏಕಿ ಜೆಸಿಬಿಯನ್ನು ಬೆಳೆ ಇಟ್ಡಿರುವ ಜಮೀನಿನಲ್ಲಿ ಪ್ರವೇಶ ಮಾಡಿ ಬೆಳೆ ನಷ್ಟ, ಸ್ವಾಧೀನಕ್ಕೆ ಅಡ್ಡಿಪಡಿಸಿ, ಜೆ.ಸಿ.ಬಿ ಇಂದ ಬೆಳೆ ಹಾಳು ಮಾಡಿ, ಮುಳ್ಳುತಂತಿ ಬೇಲಿ ನಿರ್ಮಿಸಲು ಯತ್ನಿಸಿರುತ್ತಾರೆ. ಆದರೆ ದಿಕ್ಕುತೋಚದಂತಾದ ರೈತರು ತಮ್ಮ ಬೆಳೆ ನಾಶ ಮಾಡದಂತೆ ಜೆ.ಸಿ.ಬಿಯನ್ನು ಅಡ್ಡಗಟ್ಟಿ ತಮ್ಮ ಆಕ್ರಂದನ ವ್ಯಕ್ತಪಡಿಸಿರುತ್ತಾರೆ. ಈ ಬಗ್ಗೆ ರೈತರು ಗುಡಿಬಂಡೆ ಪೋಲೀಸ್ ಠಾಣೆಗೆ ದೂರು ನೀಡಿದ್ದಕ್ಕಾಗಿ ಪೊಲೀಸ್ ಮಧ್ಯ ಪ್ರವೇಶ ಮಾಡಿ ಇದು ಸಿವಿಲ್ ಪ್ರಕರಣ ನೀವು ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೆ ಯಾವುದೇ ರೀತಿಯ ಕಾಂಪೌಂಡ್ ಹಾಕದೆ ರೈತರಿಗೆ ತೊಂದರೆ ನೀಡಬಾರದು ಎಂದು ತಿಳಿಸಿದ್ದಾರೆ. ಬಡ ಗ್ರಾಮೀಣ ರೈತರು ನ್ಯಾಯಕ್ಕಾಗಿ ತಮ್ಮ ಸಂಕಷ್ಟ ವ್ಯಕ್ತಪಡಿಸಿ ಸಂಬಂಧಿಸಿದ ಕಂದಾಯ ಅಧಿಕಾರಿಗಳು ಇವರಿಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.
ವರದಿ- ಮಂಜುನಾಥ್