ಶುದ್ಧ ಕನ್ನಡತಿ ಅಪರ್ಣಾರಿಗೆ ಅರ್ಪಣೆ
ಸತ್ಯವೋ ಮಿಥ್ಯವೋ ಗೊಂದಲದ ಗಳಿಗೆ
ಪರದೆಯ ಮೇಲೆ ಇನ್ನಿಲ್ಲ ಪದ ಕಂಡು
ಕೊರಗಿತ್ತು ಮನ ನಡುಗಿತ್ತು ಶ್ವಾಸ
ಅಘಾತವೋ ಅಪಘಾತವೋ ಆತ್ಮಘಾತವೋ
ಒಂದು ಕ್ಷಣ ಮೌನ ತಟ್ಟನೆ ಜಾರಿದ ಕಂಬನಿ
ಕೊನೆಗೂ ಅರಿಯಿತು ಆತ್ಮ ಹಾರಿದ್ದು ದಿಟ
ಕಿರುನಗೆಯ ಬಿಳಿ ಚೆಲುವೆ ಮಾಯಾವದಳು
ನಗುತ್ತಾ ನಗಿಸುತ್ತಾ ಬದುಕಿದ ದುಂಬಿ
ಕಾಣದೆ ಹಾರುತಿದೆ ಜಡ್ಡಿನ ಬಾಧೆಗೆ
ಬೆಂಕಿಯಲ್ಲಿ ಅರಳಿ ಬಾಣಲೆಯಲ್ಲಿ ಬೆಂದು
ಬಂಗಾರವಾಯಿತು ಕನ್ನಡದ ಪುಟದಲ್ಲಿ
ಉಳಿಯುವುದು ಅಳಿಯಿತು ಒಣಗಿದ ಕೊಂಬೆಯಂತೆ
ತಾಯ್ನೆಲದ ಪದಗಳಿಗೆ ಹೃದಯ ಅಡವಿಟ್ಟು
ಕರಿ ಮಣ್ಣ ಜನರ ಭಾವದಲ್ಲಿ ಬೆಸೆದು
ವಾಗ್ಮಿಯಾದಳು ಪಂಚನಹಳ್ಳಿಯ ಪುಟ್ಟ
ಮಾತನ್ನು ಹೂಡಿ ಕಾಯಕವ ಕಟ್ಟಿ
ನಿತ್ಯ ರೂಪಿಸಿದಳು ನಿರೂಪಣೆಯ ಚಾವಣಿ
ಶೃಂಗಾರ ನುಡಿಗೆ ಸೋಲು ಅಳಿದಿತ್ತು
ಹತ್ತಾರು ಜಗಲಿಗಳು ನೂರಾರು ಮಂಟಪಗಳು
ಗೆಳೆಯರಾಗಲು ಕಾಯುತ್ತಿದ್ದವು
ಮಾತಿನ ಪರಿಮಳ ಕಂಠದ ಮಧುಫಲಕ್ಕೆ
ಸರತಿ ಸಾಲಿನಲ್ಲಿ ಇಣುಕುತ್ತಿದ್ದವು
ಹೊತ್ತುಗಳು ಮುಳುಗಿ ನೇಸರ ಕಳೆದರು
ಮಾತ ಗೌರಿಯ ಮಾತೇ ಮಾಣಿಕ್ಯ
ಕನ್ನಡದ ಅಸ್ಮಿತೆ ಹೃದಯ ಹೂವು
ಕಾಣದ ದಾರಿ ಹಿಡಿದಿದೆ
ನುಡಿಗಳ ಮಲ್ಲಿಗೆ ವರ್ಣ ನಿಲ್ಲಿಸಿದೆ
ಎದೆಯತ್ತರದ ಆಲಕ್ಕೆ ನಂಜು ಬಿದ್ದಿದೆ
ಬರಸಿಡಿಲು ಬಡಿದು ಕತ್ತಲಾಗಿದೆ ಕರುನಾಡು
ಯಾರಿಗೂ ಹೇಳದೇ ಹೊರಟು ನಿಂತರು
ಮುಂದಿನ ನಿಲ್ದಾಣದತ್ತ..
-ಚೌಡ್ಲಾಪುರ ಸೂರಿ.