ಯಾದಗಿರಿ:ನಾರಾಯಣಪೂರ ಆಣೆಕಟ್ಟೆಯ ಕೆಳಭಾಗದ ಕೃಷ್ಣಾ ನದಿ ಪಾತ್ರದ ಹತ್ತಿರದಲ್ಲಿರುವ ಗ್ರಾಮಗಳ ಜನ ಜಾನುವಾರುಗಳ ಸುರಕ್ಷತೆಯ ಮುಂಜಾಗ್ರತಾ ಕ್ರಮವಾಗಿ ಮುನ್ಸೂಚನೆ ನೀಡಲಾಗುತ್ತಿದೆ ಎಂದು ನಾರಾಯಣಪೂರ ಕೃ.ಭಾ.ಜ.ನಿ.ನಿ ಅಧೀಕ್ಷಕ ಅಭಿಯಂತರರು ಅವರು ತಿಳಿಸಿದ್ದಾರೆ.
2024-25ನೇ ಸಾಲಿನ ಮುಂಗಾರು ಪ್ರಾರಂಭವಾಗಿದ್ದು, ಮಹಾರಾಷ್ಟç ರಾಜ್ಯದ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಪ್ರಾರಂಭವಾಗಿರುತ್ತದೆ. ಆಲಮಟ್ಟಿ ಜಲಾಶಯದಿಂದ ನಾರಾಯಪೂರ ಜಲಾಶಯಕ್ಕೆ 40,000 ಕ್ಯೂಸೆಕ್ಸ ಪ್ರಮಾಣದ ನೀರನ್ನು ಹರಿಬಿಡಲಾಗುತ್ತಿದೆ. 2024ರ ಜುಲೈ 16 ರಂದು ನಾರಾಯಣಪೂರ ಜಲಶಯದ ನೀರಿನ ಮಟ್ಟ 490.18 ಮೀ.ಇದ್ದು, ಜಲಾಶಯದ ನೀರಿನ ಸಂಗ್ರಹಣೆ 24.675 ಟಿಎಂಸಿ ಇರುತ್ತದೆ ಹಾಗೂ ಜಲಾಶಯಕ್ಕೆ 40,000 ಕ್ಯೂಸೆಕ್ಸ್ ನೀರಿನ ಒಳಹರಿವು ಬರುತ್ತಿದೆ.
ನಾರಾಯಣಪೂರ ಜಲಾಶಯಕ್ಕೆ ಬರುವ ನಿರೀಕ್ಷಿತ ಒಳಹರಿವಿನ ಮಾಹಿತಿಯನ್ನು ಕೇಂದ್ರ ಜಲ ಆಯೋಗ ಮೂಲಕ ಪಡೆಯಲಾಗುತ್ತಿದೆ. ಅದೇ ರೀತಿ ನಾರಾಯಣಪುರ ಜಲಾಶಯದ ಹಿಂಭಾಗದ ಜಲಾಶಯಗಳಾದ ಆಲಮಟ್ಟಿ ಜಲಾಶಯ ಹಾಗೂ ನವಿಲು ತೀರ್ಥ ಜಲಾಶಯಗಳಿಂದ ಬಿಡಬಹುದಾದ ಹೊರಹರಿವಿನ ಮಾಹಿತಿಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಂದ ಮುಂಜಾಗ್ರತಾ ಕ್ರಮಕ್ಕಾಗಿ ಪಡೆಯಲಾಗುತ್ತಿದ್ದು, ಪ್ರವಾಹ ನಿಯಂತ್ರಣ ಕಾರ್ಯಕ್ಕಾಗಿ ನಾರಾಯಣಪೂರ ಜಲಾಶಯವನ್ನು ಸನ್ನದ್ಧತೆಯಲ್ಲಿ ಇಟ್ಟುಕೊಳ್ಳಲಾಗಿದೆ.
ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆಗೊಳಿಸುವ ಸಾಧ್ಯವಿರುವ ಕಾರಣ ನಾರಾಯಣಪುರ ಜಲಾಶಯಕ್ಕೆ ಹರಿದು ಬರುವ ಒಳಹರಿವು ಪ್ರಮಾಣಕ್ಕನುಗುಣವಾಗಿ ನಾರಾಯಣಪೂರ ಜಲಾಶಯದಿಂದ ಕೆಳಭಾಗದ ಕೃಷ್ಣಾ ನದಿ ಪಾತ್ರಕ್ಕೆ ಯಾವುದೇ ಕ್ಷಣದಲ್ಲಿ ಪ್ರವಾಹದ ನೀರನ್ನು ಹರಿಬಿಡುವ ಸಾಧ್ಯತೆ ಇರುತ್ತದೆ.
ನಾರಾಯಣಪೂರ ಜಲಾಶಯದ ಕೆಳಭಾಗದ ಕೃಷ್ಣಾ ನದಿ ಪಾತ್ರದ ಪ್ರದೇಶದಲ್ಲಿರುವ ಗ್ರಾಮಗಳ ಜನರು, ರೈತರು ಜಾಗ್ರತೆಯಿಂದ ಇರಲು ಹಾಗೂ ತಮ್ಮ ಜಾನುವಾರುಗಳು, ಪಂಪ್‌ಸೆಟ್ ಇತ್ಯಾದಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿಕೊಳ್ಳಲು ಹಾಗೂ ನದಿಪಾತ್ರದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಪ್ರವಾಹದ ಮುನ್ಸೂಚನೆ ನೀಡಲು ಸಂಬಂಧ ಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲು ತಿಳಿಸಿದೆ.
ಪ್ರವಾಹ ಮುನ್ನಚ್ಚರಿಕೆ ಕ್ರಮಗಳಿಗಾಗಿ ಮನವಿ: 1,00,000 ಕ್ಯೂಸೆಕ್ಸ ವರೆಗೆ ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ ಜಾನುವಾರುಗಳಿಗೆ ಸುರಕ್ಷತೆಗಾಗಿ ನದಿಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಜಾಗ್ರತೆ ನೀಡುವುದು.1,50,000 ಕ್ಯೂಸೆಕ್ಸ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು. 2,50,000 ಕ್ಯೂಸೆಕ್ಸ ಹೂವಿನಹೆಡಗಿ ಸೇತುವೆ (ದೇವದುರ್ಗಾ-ಕಲಬುರ್ಗಿ ರಾಜ್ಯ ಹೆದ್ದಾರಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು.
3,00,000 ಕ್ಯೂಸೆಕ್ಸ್ ಸುರಪುರ ತಾಲೂಕಿನ ನೀಲಕಂಠ ರಾಯನಗಡ್ಡಿ ಗ್ರಾಮ ನಡುಗಡೆಯಾಗಬಹುದು. 3,90,000 ಕ್ಯೂಸೆಕ್ಸ ಗುರ್ಜಾಪುರ ಬ್ಯಾರೇಜ್ ಹಾಗೂ ಸೇತುವೆ ಮುಳುಗಡೆಯಾಗಬಹುದು. 3,90,000 ಕ್ಯೂಸೆಕ್ಸ ಮೇಲ್ಪಟ್ಟು ಕೃಷ್ಣಾ ನದಿ ಇಕ್ಕೆಲಗಳಲ್ಲಿ ಪ್ರವಾಹ ಉಕ್ಕಿ ಹರಿಯುವುದರಿಂದ, ನದಿ ಪಾತ್ರದ ಗ್ರಾಮಗಳ ಜನರಿಗೆ ಪ್ರವಾಹದ ಸುರಕ್ಷತೆ ಕುರಿತು ಮುನ್ನೆಚ್ಚರಿಕೆಯಿಂದಿರಲು ಸೂಚಿಸುವುದು. 5,40,000 ಕ್ಯೂಸೆಕ್ಸ್ ಯರಗೋಡಿ ಸೇತುವೆ, ಜಲದುರ್ಗಾ ಸೇತುವೆ ಮತ್ತು ಗೂಗಲ್ ಗ್ರಾಮದ ಹತ್ತಿರ ಗೂಗಲ್ ಬ್ಯಾರೇಜ್ ಮುಳುಗಡೆಯಾಗಬಹುದು. 7,50,000 ಕ್ಯೂಸೆಕ್ಸ ಸುರಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ತಿಂಥಣಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ವರದಿ: ಶಿವರಾಜ ಸಾಹುಕಾರ್, ವಡಗೇರಾ