ಶಿವಮೊಗ್ಗ:ಸಾಲು ಸಾಲು ಹಗರಣಗಳ ಸರಮಾಲೆಯನ್ನೇ ಹೊತ್ತ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಗಿರೀಶ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ಹಗರಣಗಳನ್ನು ಮಾಡಿದ್ದು, ಸಾವಿರಾರು ಕೋಟಿ ಗುಳುಂ ಮಾಡಲಾಗಿದೆ. ಈ ಬಗ್ಗೆ ಮೊದಲು ತನಿಖೆ ಆಗಬೇಕು. ಈ ಹಗರಣಗಳ ಬಗ್ಗೆ ಯಾಕೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಸೆಪ್ಟಂಬರ್ 2012ರಲ್ಲಿ ಕೆಐಎಡಿಬಿಯ ಬೆಂಗಳೂರಿನ ಬ್ಯಾಂಕ್ ಖಾತೆಯಿಂದ ಸೇಲಂ ಬ್ಯಾಂಕ್ ಖಾತೆಗೆ ಕೋಟ್ಯಂತರ ವರ್ಗಾವಣೆಯಾಗಿದೆ. ಅದೇ ರೀತಿ 2013ರ ಮೇ ತಿಂಗಳಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 10 ಕೋಟಿ ಹಣ ಅಕ್ರಮ ವರ್ಗಾವಣೆಯಾಗಿದೆ. 2018ರ ಜೂನ್‍ನಲ್ಲಿ ಜೆಡಿಎಸ್‍ನ ಹೆಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಖಾತೆಯಿಂದ 4.95 ಕೋಟಿ ಹಣ 10 ಜನ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ.
ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಸಿಎಂ ಆದ ಅವಧಿಯಲ್ಲಿ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಖಾತೆಯಿಂದ 22.43 ಕೋಟಿ ಸ್ಥಿರ ಠೇವಣಿಯನ್ನು ಖಾಸಗಿ ವ್ಯಕ್ತಿಗೆ ಸಂದಾಯ ಮಾಡಲಾಗಿದೆ. ನಂತರ ಜನವರಿ 2019ರಲ್ಲಿ ಕೃಷಿ ಮಾರುಕಟ್ಟೆ ಮಂಡಳಿಯಿಂದ 47.16 ಕೋಟಿ ಸ್ಥಿರ ಠೇವಣಿ ಖಾಸಗಿ ವ್ಯಕ್ತಿಗಳಿಗೆ ಸಂದಾಯವಾಗಿದೆ.
ನಂತರ ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಫೆಬ್ರವರಿ 2022ರಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ಅಕ್ರಮವಾಗಿ 87 ಕೋಟಿ ಹಣ ವಿವಿಧ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. 2021ರಿಂದ 2023ರ ವರೆಗೆ ದೇವರಾಜ್ ಟ್ರಕ್ ಟರ್ಮಿನಲ್ ನಿಗಮದಿಂದ ಅಕ್ರಮ ವರ್ಗಾವಣೆಯಿಂದ 47 ಕೋಟಿ ನಷ್ಟವಾಗಿದ್ದು, ನಿಗಮದ ಅಧ್ಯಕ್ಷ ವೀರಯ್ಯ ಅವರ ಖಾತೆಗೆ 3 ಕೋಟಿ ಅಕ್ರಮವಾಗಿ ವರ್ಗಾವಣೆಯಾಗಿದೆ.
ಈ ಅಂಕಿ ಅಂಶಗಳೆಲ್ಲಾ ಅವರದೇ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ನೀಡಿರುವ ಮಾಹಿತಿಗಳಾಗಿವೆ. ಭೋವಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ಭ್ರಷ್ಟಾಚಾರದ ಬಗ್ಗೆ ಅಂದಿನ ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರೇ ಒಪ್ಪಿಕೊಂಡಿದ್ದರು. ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿತ್ತು. ಇದೆಲ್ಲಾ ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಕ್ಕೆ ಕನ್ನಡಿ ಹಿಡಿದಂತಾಗಿದೆ. ಈ ಬಗ್ಗೆ ತನಿಖೆ ಮಾಡಲು ಇವರ್ಯಾರೂ ಒತ್ತಾಯ ಮಾಡುತ್ತಿಲ್ಲ.ತಾವೇ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು, ಭ್ರಷ್ಟಾಚಾರದಿಂದ ತಿಂದು ತೇಗುತ್ತಾ ದಕ್ಷ ಆಡಳಿತ ನಿಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದು, ಸದನದಲ್ಲಿ ವಿನಾಕಾರಣ ಕಾಲಹರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಎಸ್.ಗಿರೀಶ್, ಬಿಜೆಪಿ-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಸಾಲು ಸಾಲು ಹಗರಣಗಳ ಬಗ್ಗೆ ಮೊದಲು ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ