ಯಾದಗಿರಿ:ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು ಹಾಗೂ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿ ಮಕ್ಕಳಲ್ಲಿ ನೂನ್ಯತೆ ಕಂಡು ಬಂದ ಮಕ್ಕಳಿಗೆ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರ ಯಾದಗಿರಿ ಇಲ್ಲಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗುವದು, ಅದರಂತೆ ಪ್ರತಿ ತಿಂಗಳು 18ನೇ ತಾರೀಖಿನಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಯಾದಗಿರಿ ರವರ ಆದೇಶದ ಮೇರೆಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಪ್ರಭುಲಿಂಗ.ಕೆ ಮಾನಕರ ಅವರು ಹೇಳಿದರು.
ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದಂತೆ ಇತ್ತೀಚಿನ ಕಾರ್ಯಕ್ರಮ 2024ರ ಜುಲೈ 18 ರಂದು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಉಚಿತ ಆರೋಗ್ಯ ಶಿಬಿರ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಯಿತು.
ಜಿಲ್ಲೆಯಲ್ಲಿರುವ ಎಲ್ಲಾ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳ ಆರೋಗ್ಯ ತಪಾಸಣೆ ಕೈಗೊಂಡು ಮಕ್ಕಳ ತಂದೆ ತಾಯಿಯರಿಗೆ ಈ ಉಚಿತ ಆರೋಗ್ಯ ಶಿಬಿರದ ಲಾಭ ಪಡೆದುಕೊಳ್ಳುವಂತೆ ತಿಳಿಸಿ ತಮ್ಮ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವಂತೆ ಪಾಲಕರಿಗೆ ತಿಳಿ ಹೇಳಿದರು.
ಅದೇ ರೀತಿ ಜಿಲ್ಲಾ ಸಂತಾನೋತ್ಪತ್ತಿ ಅಧಿಕಾರಿಗಳಾದ ಡಾ.ಮಲ್ಲಪ್ಪ.ಕೆ ನಾಯ್ಕಲ್ ಅವರು ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡಗಳು ಸಮರ್ಪಕ ಆರೋಗ್ಯ ತಪಾಸಣೆ ಮಾಡಿ ಮಕ್ಕಳಲ್ಲಿ ಕಂಡು ಬಂದಿರುವ ಎಲ್ಲಾ ನೂನ್ಯತೆಗಳು ಇದ್ದಂತಹ ಮಕ್ಕಳಿಗೆ ಉಚಿತ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ನೀಡುವ ಜವಾಬ್ದಾರಿಯು ಸಂಬಂಧಿಸಿದ ತಂಡಗಳು ನಿರ್ವಹಿಸಬೇಕು ಎಂದು ಹೇಳಿದರು ಮತ್ತು ಯಾವುದೇ ಮಕ್ಕಳು ಚಿಕಿತ್ಸೆಯಿಂದ ವಂಚಿತರಾಗಬಾರದೆಂದು ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ರಿಜ್ವಾನ ಆಫ್ರಿನ ಅವರು ಮಾತನಾಡಿ, ಹುಟ್ಟಿನಿಂದ 18 ವರ್ಷದೊಳಗಿರುವ ಮಕ್ಕಳು ನೂನ್ಯತೆಗೆ ಒಳಗಾದ ಎಲ್ಲಾ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳಿಗೆ ಶಿಬಿರ ಒಂದು ಒಳ್ಳೆಯ ಸ್ಥಳವಾಗಿದ್ದು,ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು,ಅಭಿಪ್ರಾಯ ವ್ಯಕ್ತಪಡಿಸಿದರು.
ಉಚಿತ ಆರೋಗ್ಯ ಶಿಬಿರದಲ್ಲಿ ಒಟ್ಟು 75 ಮಕ್ಕಳು ಹಾಜರಾಗಿದ್ದು ಅದರಲ್ಲಿ 11 ಮಕ್ಕಳಿಗೆ ದಂತ ಚಿಕಿತ್ಸೆ 10 ಮಕ್ಕಳಿಗೆ ನೇತ್ರ ತಪಾಸಣೆ ಪರೀಕ್ಷೆ ಮಾಡಿ ಅದರಲ್ಲಿ 5 ಮಕ್ಕಳಿಗೆ ಕನ್ನಡಕ ವಿತರಿಸಲಾಯಿತು, ಹಾಗೂ 2 ಮಕ್ಕಳಿಗೆ ಹೃದಯ ಕಾಯಿಲೆ 10 ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು 25 ಮಕ್ಕಳಲ್ಲಿ ರಕ್ತ ಹೀನತೆ, 2 ಮಕ್ಕಳಿಗೆ ಅಂಗವಿಕಲತೆ ಪ್ರಮಾಣ ಪತ್ರ ನೀಡಲಾಯಿತು ಎಂದು ತಿಳಿಸಿದರು.
ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದ ಕಾರ್ಯಾಚರಣೆ : ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ 1 ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಜೊತೆಗೆ 0-6ವರ್ಷದೊಳಗಿನ ಮಕ್ಕಳನ್ನು ಸಹ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಂಯೋಗದೊಂದಿಗೆ ವೈದ್ಯಕೀಯ ತಪಾಸಣೆ ಮಾಡಿ ತೊಂದರೆಯಿರುವ ಮಕ್ಕಳಿಗೆ ಸೂಕ್ತ ವೈದ್ಯಕೀಯ ಹಾಗೂ ಶಸ್ತ್ರ ಚಿಕಿತ್ಸೆ ಸೌಲಭ್ಯ ಉಚಿತವಾಗಿ ರಾಷ್ಟ್ರೀಯ ಅಭಿಯಾನದಡಿಯಲ್ಲಿ ನೀಡಲಾಗುವುದು ಎಂದು ಹೇಳಿದರು.
ಧೃಡವಾದ ಸಮಾಜ ಸೃಷ್ಠಿಯಾಗಲು ಮಕ್ಕಳು ಹುಟ್ಟಿನಿಂದಲೇ ಆರೋಗ್ಯವಂತರಾಗಿರುವುದರ ಕಡೆ ಹೆಚ್ಚು ಗಮನ ನೀಡಿ ಅವರಲ್ಲಿ ಹುಟ್ಟಿನಿಂದಲೇ ಬರಬಹುದಾದ ಸಮಸ್ಯೆ ಪತ್ತೆ ಹಚ್ಚಿ ಮುಂಜಾಗೃತಾ ವೈದ್ಯಕೀಯ, ಶಸ್ತ್ರ ಚಿಕಿತ್ಸೆ ನೀಡಬೇಕಾಗಿರುವುದರಿಂದ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರವು ಇದರಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ, ಜಿಲ್ಲೆಯ ಎಲ್ಲಾ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಜನಿಸಿದ ಮಕ್ಕಳಿಗೆ ಜನನದಲ್ಲಿ ಕಂಡು ಬರುವ ನೂನ್ಯತೆಗಳಿಗೆ ಉಚಿತ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವದು ಮತ್ತು ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದಲ್ಲಿ ಸೌಲಭ್ಯವೂ ಸಿಗದೇ ಇದ್ದ ಸಂದರ್ಭದಲ್ಲಿ ಅಂತಹ ಮಕ್ಕಳ ಪಾಲಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ಕಾರ್ಯಕ್ರಮದ ನೋಂದಾಯಿತ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.
2023-24ನೇ ಸಾಲಿನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು 18ನೇ ತಾರೀಖಿನಂದು ಉಚಿತ ಆರೋಗ್ಯ ಶಿಬಿರದಲ್ಲಿ ಒಟ್ಟು 1465 ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು. ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದಲ್ಲಿ ದೊರೆಯುವ ಸೇವೆಗಳು, ಮಕ್ಕಳ ತಜ್ಞರ ಸೇವೆಗಳು, ಶ್ರವಣ ತಪಾಸಣಾ ಸೇವೆಗಳು, ಭೌತಿಕ ಸೇವೆಗಳು, ಮನೋಶಾಸ್ತç ಸೇವೆಗಳು, ವಿಶೇಷ ಶಿಕ್ಷಣ ಸೇವೆಗಳು, ನೇತ್ರ ತಪಾಸಣಾ ಸೇವೆಗಳು ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂತಾನೋತ್ಪತ್ತಿ ಅಧಿಕಾರಿಗಳಾದ ಡಾ.ಮಲ್ಲಪ್ಪ.ಕೆ ನಾಯ್ಕಲ್, ಶಿಬಿರದಲ್ಲಿ ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದ ಮಕ್ಕಳ ತಜ್ಞರಾದ ಡಾ.ಗುರುರಾಜ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಮನೋಹರ ಪಾಟೀಲ್, ಜಿಲ್ಲಾ ಶೀಘ್ರ ಮಧ್ಯಸ್ಥಿಕೆ ಕೇಂದ್ರದ ವ್ಯವಸ್ಥಾಪಕರು ಶಿವಲಿಂಗಪ್ಪ, ಜಿಲ್ಲೆಯ ಎಲ್ಲಾ ಆರ್.ಬಿ.ಎಸ್.ಕೆ ತಂಡದ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ