ಯಾದಗಿರಿ: 2024-25 ನೇ ಸಾಲಿನಲ್ಲಿ ಯಾದಗಿರಿ ಮತ್ತು ಗುರುಮಿಠಕಲ್ ತಾಲ್ಲೂಕಿನಲ್ಲಿ ಒಟ್ಟಾರೆಯಾಗಿ 1,18,616 ಹೆಕ್ಟರ್ ಪ್ರದೇಶದ ಬಿತ್ತನೆ ಗುರಿಯನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಈವರೆಗೆ 104005 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಅಂದರೆ ಶೇ% 87.68 ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. 4711 ಹೆಕ್ಟರ್ ಪ್ರದೇಶದಲ್ಲಿ ಹತ್ತಿ, 28500 ಹೆಕ್ಟರ್ ಪ್ರದೇಶದಲ್ಲಿ ತೊಗರಿ, 15054 ಹೆಕ್ಟರ್ ಪ್ರದೇಶದಲ್ಲಿ ಹೆಸರು ಹಾಗೂ 12740 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ. ಈವರೆಗಿನ ವಾಡಿಕೆ ಮಳೆ 325 ಮಿ.ಮೀ. ಇದ್ದು, ಅದರಲ್ಲಿ ಈಗಾಗಲೇ 310 ಮಿ.ಮೀ. ಮಳೆಯಾಗಿರುತ್ತದೆ. ಕಳೆದ ಒಂದು ವಾರದಿಂದ ಸತತವಾಗಿ ತುಂತುರು ಮಳೆ ಬರುತ್ತಿದ್ದು. ಬಿತ್ತನೆಯಾದ ತೊಗರಿ ಹಾಗೂ ಹೆಸರಿನ ಬೆಳೆಗಳು ಚೇತರಿಸಿಕೊಳ್ಳುತ್ತೀವೆ ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕರು ಅವರು ತಿಳಿಸಿದ್ದಾರೆ.
ಕಪ್ಪು ಮಣ್ಣಿನಲ್ಲಿ ಬಿತ್ತನೆಯಾದ ಹೆಸರಿನ ಬೆಳೆಯು ಹೆಚ್ಚಿನ ತೇವಾಂಶದಿಂದ ಬಳಲುತ್ತಿದ್ದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಕಾರಣ ಹೊಲದ ಸುತ್ತವೂ ಒಂದು ಅಡಿ ಆಳದ ಬಸಿಗಾಲುವೆಯನ್ನು ತೆಗೆದು ನೀರನ್ನು ಹೊರ ಹಾಕಬೇಕು ಜೊತೆಗೆ ಪ್ರತಿ 10 ಮೀಟರ್ ಹಂತರದಲ್ಲಿ 1 ರಂತೆ ಒಂದು ಅಡಿ ಆಳದ ನೇಗಿಲ ಸಾಲು ತೆಗೆದು ನೀರು ಹೊರ ಹಾಕಿ. ನೀರಿನಲ್ಲಿ ಕರಗುವ 19:19:19 ಎನ್.ಪಿ.ಕೆ 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಿ. ಹಳದಿ ರೋಗ ಹಾಗೂ ಎಲೆ ಮುದುಡು ರೋಗ ಕಂಡುಬಂದಲ್ಲಿ ಕಾರ್ಬೈಡೈಜಿಮ್ + ಮ್ಯಾನ್‌ಕೊಜೆಬ್ 3 ಗ್ರಾಂ ಹಾಗೂ ಥೈಯೊಮೆಥಾಕ್ಸಾಮ್ 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ವರದಿ: ಶಿವರಾಜ ಸಾಹುಕಾರ್ ವಡಗೇರಾ